ADVERTISEMENT

ಮಹಾಶಿವರಾತ್ರಿಗೆ ಅಣಿಯಾದ ಕೊಡಗು: ಭರದಿಂದ ನಡೆದಿದೆ ಬಿಲ್ವಪತ್ರೆ, ಹೂ ಖರೀದಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:02 IST
Last Updated 15 ಫೆಬ್ರುವರಿ 2026, 3:02 IST
   

ಮಡಿಕೇರಿ: ಮಹಾಶಿವರಾತ್ರಿ ಆಚರಣೆಗಾಗಿ ಕೊಡಗು ಜಿಲ್ಲೆಯಲ್ಲಿನ ಎಲ್ಲ ಶಿವಾಲಯಗಳೂ ಅಣಿಯಾಗಿವೆ. ಭಕ್ತರು ಭಕ್ತಿಭಾವದ ಆಚರಣೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಠಗಳಲ್ಲಿ ಜಾಗರಣೆ, ಪೂಜಾ ಕೈಂಕರ್ಯಗಳಿಗಾಗಿ ಸಿದ್ಧತಾ ಕಾರ್ಯಗಳು ನಡೆದಿವೆ.

ಮುಖ್ಯವಾಗಿ, ಇಲ್ಲಿನ ಓಂಕಾರೇಶ್ವರ ದೇವಾಲಯ, ಮಹದೇವಪೇಟೆಯ ಬಸವೇಶ್ವರ ದೇಗುಲ, ದಾಸವಾಳ ರಸ್ತೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯಗಳೂ ಸೇರಿದಂತೆ ನಗರದ ಬಹುತೇಕ ದೇಗುಲಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ಇರಲಿವೆ. ಇದಕ್ಕಾಗಿ ತೋರಣ ಕಟ್ಟುವುದು, ಸ್ವಚ್ಛತೆ, ಅನ್ನಸಂತರ್ಪಣೆಗೆ ಸಿದ್ಧತಾ ಕಾರ್ಯಗಳು ಶನಿವಾರ ನಡೆದವು.

ಕೇವಲ ನಗರ ಮಾತ್ರವಲ್ಲ, ಜಿಲ್ಲೆಯ ಉದ್ದಗಲಕ್ಕೂ ಇರುವ ಶಿವಾಲಯಗಳು ಶಿವರಾತ್ರಿಗೆ ಅಣಿಯಾಗಿವೆ. ಭಾಗಮಂಡಲದ ಭಗಂಡೇಶ್ವರ ದೇಗುಲ, ಶನಿವಾರಸಂತೆ ಸಮೀಪದ ಮಳೆಮಲ್ಲೇಶ್ವರ ದೇಗುಲ ಹೀಗೆ ಹಲವು ಹತ್ತು ದೇಗುಲಗಳಲ್ಲಿ ವಿಶೇಷ ‍ಪೂಜಾ ಕೈಂಕರ್ಯಗಳು ಇರಲಿವೆ. ಕೆಲವೆಡೆ ಜಾಗರಣೆಯೂ ಇದ್ದು, ಭಕ್ತ ವೃಂದ ಕಾತರದಿಂದ ಕಾಯುತ್ತಿದ್ದಾರೆ.

ADVERTISEMENT

ಮಡಿಕೇರಿ ನಗರದ ಅಲ್ಲಲ್ಲಿ ಬಿಲ್ಪಪತ್ರೆಗಳನ್ನು ಮಾರಾಟ ಮಾಡಲು ಕೆಲವು ಹೂ ವ್ಯಾಪಾರಿಗಳು ತಂದಿರಿಸಿದ್ದಾರೆ. ಒಂದು ಕಟ್ಟಿಗೆ ₹ 20 ದರ ನಿಗದಿಯಾಗಿದೆ. ಬಿಲ್ಪಪತ್ರೆ ಮಾತ್ರವಲ್ಲ, ವಿವಿಧ ಬಗೆಯ ಹೂಗಳ ಖರೀದಿಯಲ್ಲೂ ಭಕ್ತರು ತೊಡಗಿದ್ದಾರೆ.

ಮಡಿಕೇರಿಯ ದಾಸವಾಳ ರಸ್ತೆಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ಫೆ. 15 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ, 9 ಗಂಟೆಗೆ ಶ್ರೀ ವೀರಭದ್ರ ದೇವರ ಉತ್ಸವ ಮೂರ್ತಿಯ ನಗರ ಪ್ರದಕ್ಷಿಣೆಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ ಭಜನೆ ತಂಡ, ಮುಂತಾದ ತಂಡಗಳು ಭಾಗವಹಿಸಲಿವೆ.
ಮೆರವಣಿಗೆಯು ದೇವಾಲಯದಿಂದ ಹೊರಟು ದಾಸವಾಳ ರಸ್ತೆಗಾಗಿ ಗಣಪತಿ ಬೀದಿಯಿಂದ ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾದೇವಪೇಟೆಗಾಗಿ ಚೌಕಿ ವೃತ್ತದಿಂದ ಹಳೆ ಬಸ್ ನಿಲ್ದಾಣಕ್ಕಾಗಿ ಜೂನಿಯರ್ ಕಾಲೇಜು ರಸ್ತೆಗಾಗಿ ಪುನಃ ದೇವಾಲಯಕ್ಕೆ ತಲುಪುತ್ತದೆ.

ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6 ಗಂಟೆಗೆ ಮಹಾಮೃತ್ಯುಂಜಯ ಹೋಮವನ್ನು ಏರ್ಪಡಿಸಲಾಗಿದೆ. ನಂತರ ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು, ಅಲ್ಲದೇ 9 ಗಂಟೆಯಿಂದ ಪೂಜೆ ನಡೆಸಲಾಗುತ್ತದೆ.

ದೇವಾಲಯದ ಅಧ್ಯಕ್ಷ ಪಿ.ಜಿ.ಸುಕುಮಾರ್, ಗೌರವ ಅಧ್ಯಕ್ಷ ಪಿ.ಜಿ.ಮಂಜುನಾಥ್, ಉಪಾಧ್ಯಕ್ಷ ಎಂ.ಬಿ.ಚೇತನ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ವಿಷ್ಣು, ನಿದೇರ್ಶಕರಾದ ಪಿ.ಜಿ.ಕಮಲ್, ಸದಸ್ಯರಾದ ಸಂದೀಪ್ ಈ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.