ADVERTISEMENT

ಶನಿವಾರಸಂತೆಗೆ ಬಂದ ಸಾವಿರಾರು ಭಕ್ತರು!

100ಕ್ಕೂ ಅಧಿಕ ಕಿ.ಮೀ ಕಾಲ್ನಡಿಗೆಯಲ್ಲೆ ಸಾಗುವ ಸಾವಿರಾರು ಭಕ್ತರು; ಧರ್ಮಸ್ಥಳಕ್ಕೆ ಕೊಡಗಿನಿಂದ ಪಾದಯಾತ್ರೆ

ಕೆ.ಎಸ್.ಗಿರೀಶ್
Published 23 ಫೆಬ್ರುವರಿ 2025, 5:55 IST
Last Updated 23 ಫೆಬ್ರುವರಿ 2025, 5:55 IST
ಬೇರೆ ಬೇರೆ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಹೊರಟ ಪಾದಯಾತ್ರಿಗಳು ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಶನಿವಾರ ಬಿರುಸಿನ ಹೆಜ್ಜೆ ಹಾಕಿದರು
ಬೇರೆ ಬೇರೆ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಹೊರಟ ಪಾದಯಾತ್ರಿಗಳು ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ಶನಿವಾರ ಬಿರುಸಿನ ಹೆಜ್ಜೆ ಹಾಕಿದರು   

ಮಡಿಕೇರಿ: ಚಳಿಗಾಲ ಮುಗಿದ ನಂತರ ಬೇಸಿಗೆ ಅಡಿ ಇಡುವ ಮೊದಲು ಶಿವರಾತ್ರಿ ಬಂತೆಂದರೆ ಸಾಕು ಉತ್ತರ ಕೊಡಗಿನ ಗಡಿ ಭಾಗದಲ್ಲಿ ಭಕ್ತರು ತಂಡೋಪತಂಡವಾಗಿ ಕಾಲ್ನಡಿಗೆಯಲ್ಲಿ ನಡೆಯುವ ದೃಶ್ಯಗಳು ಕಂಡು ಬರುತ್ತವೆ.

ಬಿರುಬಿಸಿಲಿನಲ್ಲಿ ಬಸವಳಿಯದೇ ನಡೆಯುತ್ತಲೇ ಸಾಗುವ ನೂರಾರು ಮಂದಿ ಶಿವರಾತ್ರಿಯ ದಿನ ಇಲ್ಲವೇ ಅದರ ಹಿಂದಿನ ದಿನ ಧರ್ಮಸ್ಥಳ ತಲುಪುತ್ತಾರೆ. ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ತಮ್ಮ ಊರಿಗೆ ವಾಪಸ್ ತೆರಳುತ್ತಾರೆ. ಈಗ ಈ ಭಕ್ತರ ನಡಿಗೆ ಆರಂಭಗೊಂಡಿದೆ. ಶನಿವಾರಸಂತೆಗೆ ಶನಿವಾರ ಸಾವಿರಾರು ಮಂದಿ ತಲುಪಿದ್ದು, ಅವರೆಲ್ಲ 23ರಂದು ಧರ್ಮಸ್ಥಳಕ್ಕೆ ತಮ್ಮ ಕಾಲ್ನಡಿಗೆ ಮುಂದುವರಿಸಲಿದ್ದಾರೆ.

ಪ್ರಮುಖವಾಗಿ ಶನಿವಾರ ಹಾಸನ ಜಿಲ್ಲೆಯ ಕೇರಳಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಹಾಗೂ ಕಾಳೇನಹಳ್ಳಿಯ ಶ್ರೀ ದಿಡ್ಡಮ್ಮತಾಯಿ ಧರ್ಮಸ್ಥಳ ಪಾದಯಾತ್ರೆ ಸಮಿತಿ ವತಿಯಿಂದ 1,200ಕ್ಕೂ ಅಧಿಕ ಮಂದಿ ಆಗಮಿಸಿ ವಿಶ್ರಮಿಸಿದರು.

ADVERTISEMENT

ಕೇವಲ ಕೊಡಗಿನ ಸೋಮವಾರಪೇಟೆ, ಕುಶಾಲನಗರದಿಂದ ಮಾತ್ರವಲ್ಲ ದೂರದ ಮಂಡ್ಯದ ಕೆ.ಆರ್.ಪೇಟೆ, ಹಾಸನದ ಕೊಣನೂರು, ಹರದನಹಳ್ಳಿ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಬೆಟ್ಟದಪುರ ಸೇರಿದಂತೆ ಅನೇಕ ಭಾಗಗಳಿಂದ ಅಪಾರ ಭಕ್ತವೃಂದ ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಕೊಡಗಿನ ಶನಿವಾರಸಂತೆಯ ಮೂಲಕ ತೆರಳುತ್ತಿದ್ದಾರೆ.

ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನ, ಜಿಎಂಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಸಂತೆ ಮಾರುಕಟ್ಟೆಯ ಮೈದಾನ, ಹಾಸನ ಗಡಿಭಾಗದ ಚಂಗಡ ಹಳ್ಳಿಯ ಬಯಲು ಪ್ರದೇಶದಲ್ಲಿ ತಂಗುತ್ತಿದ್ದಾರೆ. ಸಂಜೆ ವೇಳೆಗೆ ಸಾರ್ವಜನಿಕರು ಮಜ್ಜಿಗೆ, ತಂಪುಪಾನೀಯ, ಉಪಾಹಾರದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ಕೊಡಗಿನ ಶನಿವಾರಸಂತೆಯಲ್ಲೂ ಅನೇಕ ಸಮಿತಿಯವರು ಈ ಬಗೆಯ ಪಾದಯಾತ್ರೆಯನ್ನು ಅಯೋಜಿಸುತ್ತಿವೆ. ಅವುಗಳಲ್ಲಿ ಶನಿವಾರಸಂತೆಯ ಶ್ರೀ ಮಂಜುನಾಥ ಪಾದಯಾತ್ರೆ ಸಮಿತಿಯೂ ಒಂದು.

ಈ ಸಮಿತಿಯು ಆಯೋಜಿಸುತ್ತಿರುವ 27ನೇ ವರ್ಷದ ಪಾದಯಾತ್ರೆ ಫೆ. 23ರಿಂದ ಶನಿವಾರಸಂತೆಯಿಂದ ಆರಂಭವಾಗಲಿದೆ. ಅಲ್ಲಿನ ಮಧ್ಯಪೇಟೆಯಲ್ಲಿ ಪಾರ್ವತಿ ಚಂದ್ರಮೌಳೇಶ್ವರ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಇದು ಬಿಸಿಲೆ, ಸುಬ್ರಮಣ್ಯ, ಮಾರ್ಗದಲ್ಲಿ ಒಟ್ಟು 106 ಕಿ.ಮೀ ಕ್ರಮಿಸಿ ಧರ್ಮಸ್ಥಳ ತಲುಪಲಿದೆ.

23ರಂದು ಬೆಳಿಗ್ಗೆ ಹೊರಡುವ ಪಾದಯಾತ್ರೆಯು ಸಂಜೆಯ ಹೊತ್ತಿಗೆ ಬಿಸಿಲೆ ತಲುಪಿ ಅಲ್ಲಿ ಪಾದಯಾತ್ರಿಗಳು ತಂಗುವರು. ನಂತರ, 24ರಂದು ಮರದಾಳದ ಬೆಥನಿ ವಿಶೇಷ ಚೇತನರ ಶಾಲೆಯಲ್ಲಿ ತಂಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. 25ರಂದು ಧರ್ಮಸ್ಥಳ ತಲುಪುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸುಮಾರು 130ರಿಂದ 150ಕ್ಕೂ ಅಧಿಕ ಪಾದಯಾತ್ರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇವರಿಗೆಲ್ಲ ದಾರಿಯುದ್ದಕ್ಕೂ ನೀರು, ಊಟ, ಹಣ್ಣು, ಔಷಧಗಳನ್ನು ನೀಡಲಾಗುತ್ತದೆ. ಅಲ್ಲಲ್ಲಿ ಶಾಮಿಯಾನ ಹಾಕಿ ವಿಶ್ರಮಿಸಿಕೊಳ್ಳಲು, ಊಟ ಸೇವಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕವಾಗಿ ವಾಹನದಲ್ಲಿ ಸ್ವಯಂಸೇವಕರು ತೆರಳಲಿದ್ದಾರೆ. ಇವರೊಂದಿಗೆ ಒಬ್ಬರು ಶುಶ್ರೂಷಕರೂ ಇರಲಿದ್ದಾರೆ ಎಂದು ಸಮಿತಿಯ ಸದಸ್ಯರು ಹೇಳುತ್ತಾರೆ.

ಕೊಡ್ಲಿಪೇಟೆ ವಸಂತ್ ಭಟ್ಟರು ಅಡುಗೆಯ ಉಸ್ತುವಾರಿ ಹೊತ್ತಿದ್ದಾರೆ. ಈ ಸಮಿತಿಯಲ್ಲಿ ಹೇಮಂತ್, ಮುಳ್ಳೂರಿನ ನಂದೀಪ್, ಗೋಪಾಲಪುರ ಅಶೋಕ್, ಚಿಕ್ಕಕೊಳತ್ತೂರು ಸುಮಂತ್, ಶನಿವಾರಸಂತೆಯ ಪಾಲಾಕ್ಷ ಸೇರಿದಂತೆ ಇನ್ನೂ ಹಲವು ಮಂದಿ ಇದ್ದಾರೆ.

ಕೇರಳಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯಿಂದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಶನಿವಾರಸಂತೆಯನ್ನು ಶನಿವಾರ ತಲುಪಿದರು. ಇದಕ್ಕೂ ಮುನ್ನ ಬೆಳಿಗ್ಗೆ 5 ಗಂಟೆಯಿಂದ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೇರಳಾಪುರದ ವೀರಭದ್ರೇಶ್ವರ ದೇವಸ್ಥಾನದಿಂದ 60 ಕಿ.ಮೀ ಕಾಲ್ನಡಿಗೆ ಬಂದು ಇಲ್ಲಿ ಸೇರಿದ್ದಾರೆ. ಮರುದಿನ ಇವರು ಇಲ್ಲಿಂದ ಪಾದಯಾತ್ರೆಯಲ್ಲಿ ತೆರಳಲಿದ್ದಾರೆ. ಸಮಿತಿಯ ಪ್ರಮುಖರು ಮಂಜುನಾಥ್, ಕೆ.ಬಿ.ಆನಂದ್, ಕೆ.ಪಿ.ರವಿ ಇತರ ಸ್ವಯಂಸೇವಕರು ಇದ್ದಾರೆ.

ಹೊರ ಜಿಲ್ಲೆಗಳಿಂದ ಬಂದ ಪಾದಯಾತ್ರಿಗಳು ಶನಿವಾರಸಂತೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಆಯಾಸ ಪರಿಹಾರಕ್ಕೆ ಚಿಕಿತ್ಸೆ ಸಲಹೆ ಪಡೆದರು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಊಟ ಮಾಡಿದ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶಾಮಿಯಾನ ಹಾಕಿ ವಿಶ್ರಾಂತಿ ಪಡೆಯುತ್ತಿರುವ ಕೇರಳಾಪುರದಿಂದ ಬಂದ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ವಿಶ್ರಮಿಸಿಕೊಳ್ಳುತ್ತಿರುವ ಪಾದಯಾತ್ರಿಗಳು
ಶನಿವಾರಸಂತೆಯ ಗುಡುಗಳಲೆ ಜಾತ್ರಾ ಮೈದಾನವನ್ನು ಶನಿವಾರ ತಲುಪಿರುವ ಪಾದಯಾತ್ರಿಗಳು
ಬಿರುಬಿಸಿಲಿನಲ್ಲಿ ಕಾಲ್ನಡಿಗೆಯಲ್ಲೇ ಸಾಗುವ ಭಕ್ತರು ಶಿವರಾತ್ರಿಯಂದು ಅಥವಾ ಹಿಂದಿನ ದಿನ ಧರ್ಮಸ್ಥಳ ತಲುಪುವ ಪಾದಯಾತ್ರಿಗಳು ಭಕ್ತರಲ್ಲಿ ಸಂಭ್ರಮ, ಭಕ್ತಿ, ದೇವರನ್ನು ಕಾಣುವ ಕಾತರತೆ
ಕೇರಳಾಪುರದಿಂದ 1500 ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದೇವೆ. ಇದು 25ನೇ ವರ್ಷದ ಪಾದಯಾತ್ರೆ.
ಕೆ.ಬಿ.ಆನಂದ್ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ಕೇರಳಾಪುರ ಸ್ವಯಂಸೇವಕರು
ಹಾಸನದ ಅರಕಲಗೂಡ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಿಂದ 1200 ಮಂದಿ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದು ಶನಿವಾರ ಶನಿವಾರಸಂತೆ ತಲುಪಿದ್ದೇವೆ. ಫೆ. 25ರಂದು ಧರ್ಮಸ್ಥಳ ತಲುಪಲಿದ್ದೇವೆ
ಕೆ.ಕೆ.ಪುನೀತ್ ಕಾಳೇನಹಳ್ಳಿಯ ಶ್ರೀ ದಿಡ್ಡಮ್ಮತಾಯಿ ಧರ್ಮಸ್ಥಳ ಪಾದಯಾತ್ರೆ ಸಮಿತಿಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.