ADVERTISEMENT

ಕೊಡಗಿನ ಶಾಸಕರಿಗೂ ಕಮಿಷನ್‌: ಗುತ್ತಿಗೆದಾರ ರವಿ ಚಂಗಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 12:24 IST
Last Updated 14 ಏಪ್ರಿಲ್ 2022, 12:24 IST
ಶಾಸಕ ಬೋಪಯ್ಯ, ಅಪ್ಪಚ್ಚು ರಂಜನ್‌
ಶಾಸಕ ಬೋಪಯ್ಯ, ಅಪ್ಪಚ್ಚು ರಂಜನ್‌   

ಮಡಿಕೇರಿ: ‘ಕೊಡಗಿನಲ್ಲೂ ಕಮಿಷನ್‌ ವ್ಯವಹಾರ ನಡೆಯುತ್ತಿದೆ. ಜಿಲ್ಲೆಯ ಇಬ್ಬರು ಶಾಸಕರು ಗುತ್ತಿಗೆದಾರರಿಂದ ಕಮಿಷನ್‌ ಪಡೆಯುವುದಿಲ್ಲ ಎಂಬುದನ್ನು ಸಾಬೀತು ಪಡಿಸಲಿ’ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಅವರು ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಗುತ್ತಿಗೆದಾರರು ನಡೆಸಿರುವ ಕಾಮಗಾರಿಗೆ ಹಣ ಸರಿಯಾಗಿ ಬಿಡುಗಡೆ ಆಗುತ್ತಿಲ್ಲ. ಅದಕ್ಕೆ ಕಾರಣವೇನು? ₹ 45 ಕೋಟಿ ಬಾಕಿಯಿದೆ. ಇಬ್ಬರು ಶಾಸಕರು ಒಂದು ರೂಪಾಯಿ ಕಮಿಷನ್ ಪಡೆಯದೇ ಆ ಹಣ ಬಿಡುಗಡೆ ಮಾಡಿಸಿಕೊಡಲಿ’ ಎಂದು ಆಗ್ರಹಿಸಿದರು.

‘ಶಾಸಕ ಕೆ.ಜಿ.ಬೋಪಯ್ಯ ಅವರು ಸೋಮವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಕಚೇರಿಗೆ ಬರಲಿ. ಗುತ್ತಿಗೆದಾರರಿಂದ ಯಾರೂ ಕಮಿಷನ್‌ ಪಡೆಯುವುದಿಲ್ಲ ಎಂಬುದನ್ನು ಅವರು ಸಾಬೀತು ಪಡಿಸಲಿ’ ಎಂದು ಸವಾಲು ಹಾಕಿದರು.
‘ಜಿಲ್ಲೆಯಲ್ಲಿ ಇಬ್ಬರೂ ಬಿಜೆಪಿ ಶಾಸಕರಿದ್ದಾರೆ. ಆದರೆ, 2019ರಿಂದಲೂ ಆಗಿರುವ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಹಿಂದಿನಿಂದಲೂ ಕಮಿಷನ್‌ ದಂಧೆಯಿತ್ತು. ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ರಾಜ್ಯದಲ್ಲಿ ಶೇ 10 ಪರ್ಸೆಂಟ್‌ ಸರ್ಕಾರವೆಂದು ಈ ಹಿಂದೆ ಆಪಾದಿಸಿದ್ದರು. ಆದರೆ, ಈಗ ಬಿಜೆಪಿ ಅವಧಿಯಲ್ಲಿ ಶೇ 40ರಷ್ಟು ಲಂಚ ಕೊಡಬೇಕು. ಅಷ್ಟೊಂದು ದೊಡ್ಡ ಮೊತ್ತದ ಕಮಿಷನ್‌ ನೀಡಿದರೆ, ಗುಣಮಟ್ಟದ ಕಾಮಗಾರಿ ಮಾಡುವುದಾದರೂ ಹೇಗೆ’ ಎಂದು ರವಿ ಚಂಗಪ್ಪ ಆಕ್ರೋಶ ಹೊರಹಾಕಿದರು.

***

ಗುತ್ತಿಗೆದಾರರು ಯಾರಿಗೆ ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಬಾಯಿಗೆ ಬಂದಂತೆ ಆರೋಪ ಮಾಡುವುದಲ್ಲ. ದಾಖಲೆ ನೀಡಲಿ. ಯಾವುದು ಸತ್ಯ ಎಂಬುದನ್ನು 2023ರ ಚುನಾವಣೆಯಲ್ಲಿ ಜನರೇ ತೀರ್ಮಾನಿಸಲಿದ್ದಾರೆ
- ಕೆ.ಜಿ. ಬೋಪಯ್ಯ, ಶಾಸಕ, ವಿರಾಜಪೇಟೆ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.