
ಮಡಿಕೇರಿಯ ಸಂತ ಮೈಕಲರ ಚರ್ಚ್ ಕ್ರಿಸ್‌ಮಸ್ ಪ್ರಯುಕ್ತ ವಿದ್ಯುತ್ ದೀಪಗಳಿಂದ ಬುಧವಾರ ಜಗಮಗಿಸುತ್ತಿತ್ತು –
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಕ್ರಿಸ್‌ಮಸ್ ಸಂಭ್ರಮಕ್ಕೆ ಕಾತರರಾದ ಜನ | ಚರ್ಚ್‌ಗಳಲ್ಲಿ ಬುಧವಾರ ರಾತ್ರಿಯಿಂದಲೇ ಕಾರ್ಯಕ್ರಮಗಳು ಆರಂಭ | ಇಂದೂ ನಡೆಯಲಿದೆ ವಿಶೇಷ ಪ್ರಾರ್ಥನೆಗಳು
ಮಡಿಕೇರಿ: ಸಂಭ್ರಮದ ಕ್ರಿಸ್‌ಮಸ್‌ಗೆ ಕೊಡಗು ಅಣಿಯಾಗಿದೆ. ಶಾಂತಿದೂತನ ಆರಾಧನೆಗೆ ಕ್ರೈಸ್ತರು ಕಾತರರಾಗಿದ್ದಾರೆ.
ಜಿಲ್ಲೆಯ ಎಲ್ಲ ಚರ್ಚ್‌ಗಳೂ ಸಿಂಗಾರಗೊಂಡಿವೆ. ನಗರದ ಸಂತ ಮೈಕಲರ ಚರ್ಚ್, ಶಾಂತಿ ಚರ್ಚ್ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಚರ್ಚ್‌ಗಳೂ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ.
ಅನೇಕ ಚರ್ಚ್‌ಗಳಲ್ಲಿ ಬುಧವಾರ ರಾತ್ರಿಯಿಂದಲೇ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು ಆರಂಭವಾದವು. ಈ ವಿಶೇಷ ಪ್ರಾರ್ಥನೆಗಳು ಗುರುವಾರವೂ ನಡೆಯಲಿವೆ.
ಮತ್ತೊಂದೆಡೆ, ಚರ್ಚ್ ಆವರಣದಲ್ಲಿ ವೈವಿಧ್ಯಮಯದ ಗೋದಳಿಗಳು ರಚನೆಗೊಂಡಿವೆ. ವಿದ್ಯುತ್ ದೀಪಾಲಂಕಾರಗಳಿಂದ ಅವು ಕಂಗೊಳಿಸುತ್ತಿವೆ. ಮಕ್ಕಳ ಮನ ಸೂರೆಗೊಳ್ಳುವ ಸಂಟಾ ಕ್ಲಾಸ್ ಪ್ರತಿಕೃತಿಗಳು ಆಕರ್ಷಣೆಯ ಕೇಂದ್ರ ಬಿಂದುಗಳೆನಿಸಿವೆ.
ಕ್ರೈಸ್ತರ ಮನೆಗಳಿಗೆ ದೂರದ ಊರುಗಳಲ್ಲಿದ್ದ ಬಂಧು ಬಾಂಧವರು, ಕುಟುಂಬದ ಸದಸ್ಯರು ಈಗಾಗಲೇ ಬಂದಿದ್ದಾರೆ. ಎಲ್ಲ ಕ್ರೈಸ್ತರ ಮನೆಗಳಲ್ಲೂ ಹಬ್ಬದ ವಿಶೇಷ ಅಡುಗೆಗಳು ಸಿದ್ಧವಾಗಿವೆ. ಸ್ನೇಹಿತರನ್ನೂ ಹಬ್ಬಕ್ಕೆ ಆಹ್ವಾನಿಸಿರುವ ಅವರು ಸಂಭ್ರಮದಿಂದ ಎಲ್ಲರೂ ಕೂಡಿ ಭೋಜನ ಸವಿಯಲು ಸಿದ್ಧತೆ ನಡೆಸಿದ್ದಾರೆ.
ಮತ್ತೊಂದೆಡೆ, ನಗರದ ಬೇಕರಿಗಳಲ್ಲಿ ವೈವಿಧ್ಯಮಯವಾದ ಕೇಕ್‌ಗಳು ಬಿಸಿದೋಸೆಯಂತೆ ಮಾರಾಟವಾಗುತ್ತಿವೆ. ಪೇಸ್ಟ್ರಿ ಕೇಕ್‌ಗಳ ಖರೀದಿ ಭರಾಟೆಯೂ ನಡೆದಿದೆ. ವಿಶೇಷ ವಿನ್ಯಾಸದ ಕೇಕ್‌ಗಳನ್ನು ಖರೀದಿಸಲು ಕೇವಲ ಕ್ರೈಸ್ತರಷ್ಟೇ ಅಲ್ಲ, ಇತರರು ಮುಗಿ ಬಿದ್ದಿದ್ದಾರೆ.
ಇಲ್ಲಿನ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಶಾಂತಿ ಚರ್ಚ್‌ನಲ್ಲಿ ಬುಧವಾರ ಸಂಜೆಯಿಂದಲೇ ವಿಶೇಷ ಕಾರ್ಯಕ್ರಮಗಳು ನಡೆದಿವೆ. ಗುರುವಾರ ಇಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಲಿವೆ.
ಗುಡಿ ಮಸೀದಿ ಚರ್ಚ್‌ವುಳ್ಳ ಗೋದಲಿಗೆ ಪ್ರಥಮ ಸ್ಥಾನ
ಕ್ರಿಸ್‌ಮಸ್ ಪ್ರಯುಕ್ತ ಸಂತ ಮೈಕಲರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗೋದಲಿ ನಿರ್ಮಿಸುವ ಸ್ಪರ್ಧೆಯಲ್ಲಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಿರ್ಮಿಸಿದ ದೇವಾಲಯ ಮಸೀದಿ ಹಾಗೂ ಚರ್ಚ್‌ಗಳನ್ನು ಒಳಗೊಂಡು ಭಾವೈಕ್ಯತೆ ಸಾರುವಂತಹ ಗೋದಲಿಗೆ ಪ್ರಥಮ ಸ್ಥಾನ ದೊರೆತಿದೆ. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ ಗೋದಲಿಗೆ ದ್ವಿತೀಯ ಸ್ಥಾನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ನಿರ್ಮಾಣಕ್ಕೆ ತೃತೀಯ ಸ್ಥಾನ ದೊರೆತಿದೆ. ಗುಂಪು ಗಾಯನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗ ಪ್ರಥಮ ಪ್ರಾಥಮಿಕ ಆಂಗ್ಲ ಭಾಷಾ ವಿಭಾಗ ದ್ವಿತೀಯ ಹಾಗೂ ಪದವಿಪೂರ್ವ ಕಾಲೇಜು ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಶಾಂತಿ ಚರ್ಚ್‌ನ ಗುರುಗಳಾದ ಮಧುಕಿರಣ್ ಹಾಗೂ ಬೆಂಗಳೂರಿನ ಬೈಬಲ್ ಕಮಿಷನ್‌ನ ಪ್ರಾದೇಶಿಕ ಕಾರ್ಯದರ್ಶಿ ವಿಜಯರಾಜ್ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.