ಸೋಮವಾರಪೇಟೆ: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆಯಲ್ಲಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಮಹಿಳಾ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿ 28 ವರ್ಷ ಸಂದಿದ್ದು, ಪ್ರಸಕ್ತ ಸಾಲಿನಲ್ಲಿ 2023-24 ನೇ ಸಾಲಿನಲ್ಲಿ ₹ 11.34 ಲಕ್ಷ ಲಾಭಗಳಿಸುವ ಮೂಲಕ ಸದಸ್ಯರಿಗೆ ಶೇ 9 ಲಾಭಾಂಶ ನೀಡುತ್ತಿದೆ ಎಂದರು.
‘ಈಗಾಗಲೇ ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು, ಮುಂದುವರಿಕೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಸ್ಥಾಪನೆಯಾಗಿರುವ ಈ ಸಂಘದ ಅಡಿಪಾಯವೇ ಸದಸ್ಯರಾಗಿದ್ದು, ಎಲ್ಲರೂ ನಮ್ಮ ಸಂಘದಲ್ಲಿಯೇ ವ್ಯವಹಾರ ಮಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರೆ, ಈ ಸಂಘವು ಶತಮಾನೋತ್ಸವವನ್ನು ಯಶಸ್ವಿಯಾಗಿ ಆಚರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ನಾಗರತ್ನಮ್ಮ ಮತ್ತು ಎಲಿಜಬೆತ್ ಲೋಬೋ ಹಾಗೂ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಇಬ್ಬರು ಸದಸ್ಯರಾದ ಭಾಗೀರತಿ ಮತ್ತು ತಂಗಮ್ಮ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಜಯಂತಿ ಶಿವಕುಮಾರ್, ನಿರ್ದೇಶಕರಾದ ಲೋಕೇಶ್ವರಿ ಗೋಪಾಲ್, ಬೇಬಿ ಚಂದ್ರಹಾಸ್, ಉಮಾ ರುದ್ರಪ್ರಸಾದ್, ಶೋಭಾ ಶಿವರಾಜ್, ಸಂಧ್ಯಾರಾಣಿ ಕೃಷ್ಣಪ್ಪ, ರೂಪಶ್ರೀ ರವಿಶಂಕರ್, ಲೀಲಾವತಿ ನಿರ್ವಾಣಿ, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ದಾಕ್ಷಾಯಣಿ ಶಿವಾನಂದ್, ಮೀನಾಕ್ಷಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.