ಮಡಿಕೇರಿ: ‘ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಾಗಲೇ ಕ್ಷೇತ್ರದ ಕುರಿತು ಅಭಿರುಚಿ ಬೆಳೆಸಿಕೊಳ್ಳಬೇಕು. ನಿತ್ಯ ಪತ್ರಿಕೆ ಓದಬೇಕು. ಜಾಗತಿಕ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳಬೇಕು’ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಕಿವಿಮಾತು ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದಿಂದ ಬುಧವಾರ ನಡೆದ ‘ಮಾಧ್ಯಮ ಮಾಹಿತಿ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
‘ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ತುಡಿತ ಉಳ್ಳವರು ಸಾಮಾಜಿಕ ಬದ್ಧತೆ, ಕಳಕಳಿಯನ್ನು ಹೊಂದಿರುವುದು ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.
ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಸುರೇಶ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಪ್ರಶ್ನಿಸುವ ಗುಣವೂ ಇರಬೇಕು’ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ‘ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ಬದ್ಧತೆಯಲ್ಲಿ ಕಾರ್ಯನಿರ್ವಹಿಸಬೇಕು. ಮಾನಸಿಕ ಕ್ಷಮತೆಯೂ ಅತೀ ಮುಖ್ಯ’ ಎಂದು ಹೇಳಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ನಯನಾ ಕಶ್ಯಪ್ ಮಾತನಾಡಿ, ‘ಕಾರ್ಯಕ್ರಮದ ಅಂಗವಾಗಿ ಮಾಧ್ಯಮ ಕಾರ್ಯಾಲಯಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಾಯೋಗಿಕ ಕಲಿಕೆ ಪಡೆದಿದ್ದಾರೆ’ ಎಂದರು.
ಕಾಲೇಜಿನ ಪ್ರಭಾರ ಪ್ರಾಶುಪಾಲ ಪ‍್ರೊ.ಶ್ರೀದರ್ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಮಾಧ್ಯಮ ಕ್ಷೇತ್ರದ ಸ್ವರೂಪ ಬದಲಾವಣೆ’ ಕುರಿತು ಹಿರಿಯ ಪತ್ರಕರ್ತ ಸುನಿಲ್ ಪೊನ್ನೇಟಿ, ‘ಕಾಂಟೆಂಟ್ ಕ್ರಿಯೇಷನ್’ ಕುರಿತು ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಮಾತನಾಡಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಗ್ರೀಷ್ಮಾ ಪ್ರಥಮ, ರುಕ್ಮಿಣಿ ದ್ವಿತೀಯ, ದೀಪಿಕಾ ತೃತೀಯ ಸ್ಥಾನ, ಉತ್ತಮ ವರದಿ ಪ್ರಶಸ್ತಿಯನ್ನು ಗ್ರೀಷ್ಮಾ ಪಡೆದುಕೊಂಡರು.
ಉಪನ್ಯಾಸಕರಾದ ರವಿಶಂಕರ್, ಭೈರವಿ, ಪ್ರದೀಪ್, ಡೀನಾ, ಮೋನಿಕಾ, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರಾದ ಮಾಗುಲು ಲೋಹಿತ್, ಖುರ್ಷಿದ ಭಾನು, ಪತ್ರಕರ್ತರಾದ ಎಚ್.ಜೆ.ರಾಕೇಶ್, ಆನಂದ್ ಕೊಡಗು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.