ADVERTISEMENT

ಕೊಡಗು ವಿದ್ಯಾಲಯ: 4ರಿಂದ 7ರವರೆಗೆ ಹಾಕಿ ಹಬ್ಬ

ಸಿಬಿಎಸ್‌ಇ ದಕ್ಷಿಣ ವಲಯದ ಹಾಕಿ ಪಂದ್ಯಾವಳಿ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ 37 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 3:55 IST
Last Updated 2 ಅಕ್ಟೋಬರ್ 2024, 3:55 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ಮಡಿಕೇರಿ: ಇಲ್ಲಿನ ಕೊಡಗು ವಿದ್ಯಾಲಯದ ವತಿಯಿಂದ ಅ.4ರಿಂದ 7ರವರೆಗೆ ಸಿಬಿಎಸ್‌ಇ ದಕ್ಷಿಣ ವಲಯದ ವಲಯ 2ರ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ತಿಳಿಸಿದರು.

ADVERTISEMENT

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಗಳ 37 ತಂಡಗಳು ಇದರಲ್ಲಿ ಭಾಗವಹಿಸಲಿವೆ. ಪಂದ್ಯಗಳು ಕೂಡಿಗೆ ಮತ್ತು ಸೋಮವಾರಪೇಟೆಯ ಆಸ್ಟ್ರೋ ಟರ್ಫ್ ಮೈದಾನದಲ್ಲಿ ನಡೆಯಲಿದೆ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

14 ವರ್ಷದೊಳಗಿನ, 17 ವರ್ಷದೊಳಗಿನ ಮತ್ತು 19 ವರ್ಷದೊಳಗಿನ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿವೆ. ಕ್ರೀಡಾಪಟುಗಳು, ತರಬೇತುದಾರರು ಮತ್ತು ವ್ಯವಸ್ಥಾಪಕರು ಸೇರಿದಂತೆ ಸುಮಾರು 700 ಮಂದಿ ಭಾಗವಹಿಸಲಿದ್ದಾರೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ 60 ಪಂದ್ಯಗಳು ನಡೆಯಲಿದ್ದು, ಹಾಕಿ ಕೂರ್ಗ್‌ನ ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರರು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಹಾಗೂ ತಂಡದ ಸಿಬ್ಬಂದಿಗಳಿಗೆ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೂಡಿಗೆ ಮತ್ತು ಸೋಮವಾರಪೇಟೆಯಲ್ಲಿ ನಡೆಯುವ ಪಂದ್ಯಗಳಿಗೆ ತಂಡಗಳನ್ನು ಶಾಲಾ ಬಸ್‌ನಲ್ಲಿ ಕರೆದೊಯ್ಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಅ.4ರಂದು ಬೆಳಿಗ್ಗೆ 8.30ಕ್ಕೆ ಮಡಿಕೇರಿಯ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ ಹಾಗೂ ನಗರದ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನದ ಪಂದ್ಯವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡ ಮತ್ತು ಕೊಡಗು ವಿದ್ಯಾಲಯದ ಅಲ್ಯೂಮಿನಿ ಅಸೋಸಿಯೇಷನ್ ತಂಡಗಳ ನಡುವೆ ಆಯೋಜಿಸಲಾಗಿದೆ ಎಂದರು.

ಸಮಾರೋಪ ಸಮಾರಂಭ ಮತ್ತು ಅಂತಿಮ ಪಂದ್ಯಗಳು ಅ.7ರಂದು ಕೂಡಿಗೆಯಲ್ಲಿ ನಡೆಯಲಿವೆ. ಸಮಾರೋಪದಲ್ಲಿ ಅಂತರಾಷ್ಟ್ರೀಯ ಹಾಕಿ ಪಟು, ಮಾಜಿ ಒಲಂಪಿಯನ್ ಬಿ.ಕೆ.ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪಂದ್ಯಾವಳಿ ಆಯೋಜನಾ ಸಮಿತಿ ನಿರ್ದೇಶಕ ಡಿ.ದಾಮೋದರ ಗೌಡ, ವಿದ್ಯಾಸಂಸ್ಥೆಯ ಆಡಳಿತ ವಿಭಾಗದ ವ್ಯವಸ್ಥಾಪಕ ಪಿ.ರವಿ, ದೈಹಿಕ ಶಿಕ್ಷಕರಾದ ಎಚ್.ಟಿ.ದೀನ ಹಾಗೂ ಕೆ.ಎ.ಪಾರ್ವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.