ADVERTISEMENT

‘ಕೊಡವರೂ ಬೀಫ್ ತಿನ್ನುತ್ತಾರೆ’: ಸಿದ್ದರಾಮಯ್ಯ ಹೇಳಿಕೆಗೆ ಕೊಡವರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:32 IST
Last Updated 19 ಡಿಸೆಂಬರ್ 2020, 16:32 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಮಡಿಕೇರಿ: ‘ಕೊಡವರೂ ಬೀಫ್ ತಿನ್ನುತ್ತಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೊಡವ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೆ ಖಂಡಿಸಿ, ಕೊಡವರು ತಮ್ಮ ಅಭಿಪ್ರಾಯ ಬರೆದಿದ್ದಾರೆ. ಅವರ ಹೇಳಿಕೆ ಖಂಡಿಸಿ, ಡಿ. 21ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಕೊಡವ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲೂ ನಿರ್ಧರಿಸಲಾಗಿದೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದಿದ್ದ ‘ಗ್ರಾಮ್‌ ಜನಾಧಿಕಾರ ಸಮಾವೇಶ’ದಲ್ಲಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

‘ಯಾವ ಕೊಡವರು ಬೀಫ್ ತಿನ್ನುತ್ತಾರೆ ಸಿದ್ದರಾಮಯ್ಯ ಅವರೇ? ಮಾತಿನ ಭರದಲ್ಲಿ ನಾಲಿಗೆ ಹರಿಯಬಿಡಬೇಡಿ. ಗೋಹತ್ಯೆ ನಿಷೇಧ ಕಾಯಿದೆಗೆ ಎಲ್ಲ ಕೊಡವರ ಸಮ್ಮತಿಯಿದೆ. ಪದೇ ಪದೇ ಕೊಡವರ ವಿಷಯದಲ್ಲಿ ಯಾರೂ ಗೊಂದಲದ ಹೇಳಿಕೆ ನೀಡುವುದು ಬೇಡ’ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್‌ನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ADVERTISEMENT

‘ನಮ್ಮ ಪೂರ್ವಿಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಕೊಡವರ ನೆಲದಲ್ಲಿಯೇ ಆಚರಿಸಿ ಆಯಿತು. ಇದೀಗ ಕೊಡವರನ್ನು ಗೋಮಾಂಸ ತಿನ್ನುವವರೆಂದು ಹೇಳುತ್ತಿದ್ದೀರಾ. ಕೊಡವರ ಬಗ್ಗೆ ಮೊದಲು ತಿಳಿದುಕೊಳ್ಳಿ. ಕೊಡವರ ಬಗ್ಗೆ ಇತಿಹಾಸವನ್ನು ಓದಿ, ಆಗ ಕೊಡವರು ಯಾರು? ಅವರ ಆಹಾರ ಪದ್ಧತಿ ಏನು ಎಂಬುದು ಅರ್ಥವಾಗಲಿದೆ’ ಎಂದು ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

‘ಗೋವುಗಳನ್ನು ಮಾತೆ ಎಂದು ಪೂಜಿಸುವ ಜನಾಂಗ ಕೊಡವರದ್ದು. ಕೈಲ್‌ ಮುಹೂರ್ತದ ವೇಳೆ ಗೋವುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತೇವೆ. ಗೋವು ತಿನ್ನುವ ಜನಾಂಗವಲ್ಲ. ವಯಸ್ಸಾದ ಗೋವುಗಳನ್ನು ಮಾರಾಟ ಮಾಡುವಾಗಲೂ ಹೆಚ್ಚಿನ ಹಣ ಸಿಕ್ಕರೂ ಕೇರಳದ ಕಸಾಯಿಖಾನೆಗಳಿಗೆ ನೀಡದೆ ಅರ್ಧ ಹಣಕ್ಕೆ ಸಾಕುವವರಿಗೆ ನೀಡುವವರು ಕೊಡವರು ಎನ್ನುವುದು ತಮಗೆ ತಿಳಿದಿರಲಿ. ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಿದ್ದರಾಮಯ್ಯ ಅವರು ಕೊಡವ ಸಮುದಾಯ ಕುರಿತು ಬೇಜವಾಬ್ದಾರಿ, ಹಗುರವಾಗಿ ಮಾತನಾಡಿದ್ದಾರೆ. ಸಮುದಾಯದ ಸ್ವಾಭಿಮಾನ ಕೆಣಕುವ ಹೇಳಿಕೆ ನೀಡಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ರಾಜಕೀಯ ರಹಿತವಾಗಿ ಎಲ್ಲ ಕೊಡವರೂ ಅವರ ಹೇಳಿಕೆ ಖಂಡಿಸಬೇಕು. ಸಿದ್ದರಾಮಯ್ಯ ಅವರು ಕೊಡವ ಜನಾಂಗದವರ ಕ್ಷಮೆ ಕೇಳಬೇಕು’ ಎಂದು ಮನೆಯಪಂಡ ಕಾಂತಿ ಸತೀಶ್‌ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆಯುವ ಪ್ರತಿಭಟನೆಗೆ ದೊಡ್ಡ ಸಂಖ್ಯೆಯಲ್ಲಿ ಕೊಡವರು ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಬ್ರಿಟಿಷರ ಕಾಲದಿಂದಲೂ ಕೊಡಗಿನಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಕೊಡವರು ಎಂದಿಗೂ ಗೋಮಾಂಸ ಸೇವಿಸಿದವರಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ದರ್ಪವನ್ನು ಪ್ರದರ್ಶಿಸಿದ್ದಾರೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹಾಗೂ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ದೂರಿದ್ದಾರೆ.

ಕಾವೇರಿ ಹುಟ್ಟಿದ ನಾಡು ಕೊಡಗಿನಲ್ಲಿ ಗೋವುಗಳಿಗೆ ಪೂಜ್ಯ ಸ್ಥಾನವಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಹಾಲನ್ನು ನೀಡುವ ಗೋವುಗಳನ್ನು ಕೊಡವರು ಮಾತೃ ಸ್ವರೂಪಿಯೆಂದು ಪೂಜಿಸುತ್ತಾರೆ. ಈ ಪುಣ್ಯ ಭೂಮಿಯಲ್ಲಿ ಗೋವುಗಳ ನೆತ್ತರು ಸುರಿಯಬಾರದೆಂದು ಬ್ರಿಟಿಷರ ಕಾಲದಿಂದಲೇ ಕೊಡಗಿನಲ್ಲಿ ಗೋವುಗಳ ಹತ್ಯೆಗೆ ಅವಕಾಶವಿಲ್ಲ. ಬ್ರಿಟಿಷರು ಕೂಡ ಕೊಡವರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಆದರೆ ಅನುಭವಿ ರಾಜಕಾರಣಿ ತಮ್ಮ ನಾಲಗೆಯನ್ನು ಹರಿಬಿಟ್ಟು ಸಣ್ಣವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಟಿಪ್ಪು ಜಯಂತಿಯ ಸಂದರ್ಭದಲ್ಲೂ ಕೊಡವರ ಭಾವನೆಗಳನ್ನು ಕೆಣಕಲಾಗಿತ್ತು ಎಂದು ಮನು ಮುತ್ತಪ್ಪ ಹೇಳಿದ್ದಾರೆ.

‘ಕೊಡವರು ಬೀಫ್‌ ತಿನ್ನುತ್ತಾರೆಂದು ಹೇಳಿಲ್ಲ’: ಸಿದ್ದರಾಮಯ್ಯ ಸ್ಪಷ್ಟನೆ

‘ಆಡು, ಕುರಿ, ಕೋಳಿ, ಹಂದಿ, ದನ... ಹೀಗೆ ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ.‌ ಆಹಾರಕ್ಕೆ ಜಾತಿ, ಧರ್ಮಗಳನ್ನು ಗಂಟು ಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು,‌ ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ.

ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ’ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ಮನುಷ್ಯರನ್ನು ತಿನ್ನುವುದನ್ನು ಸಿದ್ದರಾಮಯ್ಯ ಬೆಂಬಲಿಸುತ್ತಾರಾ?’
ಚಿಕ್ಕಮಗಳೂರು: ‘
ನಾಳೆ ಯಾರಾದರೂ ಮನುಷ್ಯರನ್ನು ತಿನ್ನುವುದೇ ನಮ್ಮ ಆಹಾರ ಸಂಸ್ಕೃತಿ ಎಂದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅದನ್ನು ಬೆಂಬಲಿಸುತ್ತಾರಾ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಕುಲದೇವರು ಬೀರೇಶ್ವರ. ಬೀರೇಶ್ವರನ ವಾಹನ ಯಾವುದು ಎನ್ನುವುದನ್ನು ಅವರು ಯೋಚಿಸಲಿ. ಮೂಲ ಸಂಸ್ಕೃತಿ ಯಾವುದು? ಮತಕ್ಕಾಗಿ ಹಿಡಿದಿರುವ ವಿಚಾರ ಯಾವುದು? ಎನ್ನುವುದು ಅವರಿಗೆ ಆಗ ಅರ್ಥವಾಗುತ್ತದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಮುಖಂಡರು ಇತಿಹಾಸ ಮರೆತಿದ್ದಾರೆ. ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಕಾಂಗ್ರೆಸ್‌ಗೂ ವ್ಯತ್ಯಾಸ ಇದೆ. ಜೋಡೆತ್ತು, ಹಸು ಮತ್ತು ಕರು ಈ ಹಿಂದೆ ಕಾಂಗ್ರೆಸ್ ಗುರುತಾಗಿತ್ತು. ಯಾವ ಪಕ್ಷ ಗೋವನ್ನು ಗುರುತಾಗಿ ಇಟ್ಟುಕೊಂಡಿತ್ತೋ ಅದೇ ಪಕ್ಷ ಗೋಹತ್ಯೆಗೆ ಸಮರ್ಥನೆ ನೀಡುತ್ತಿದೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.