
ಮಡಿಕೇರಿ: ಮೇ 2ರಂದು ನಾಪೋಕ್ಲುವಿನಲ್ಲಿ ನಡೆಯಲಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಭಾಗವಹಿಸುವಂತೆ ಕೇಂದ್ರ ಕ್ರೀಡಾ ಸಚಿವ ಡಾ.ಮಾನ್ಸೂಕ್ ಲಕ್ಷ್ಮಣಭಾಯ್ ಮಾಂಡವೀಯ ಹಾಗೂ ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಅವರನ್ನು ಚೇನಂಡ ಕೊಡವ ಹಾಕಿ ಪಂದ್ಯಾವಳಿ ಸಮಿತಿಯ ಪ್ರಮುಖರ ನಿಯೋಗ ಸೋಮವಾರ ನವದೆಹಲಿಯಲ್ಲಿ ಪ್ರತ್ಯೇಕವಗಿ ಆಹ್ವಾನಿಸಿತು.
ಈ ವೇಳೆ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವೀಯ ಅವರು ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಒಗ್ಗಟ್ಟು, ಬೆಸುಗೆಯಾಗಿ ರೂಪಿಸಿರುವುದು ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲ, ಪಂದ್ಯ ವೀಕ್ಷಿಸಲು ಬರುವುದಾಗಿ ಸಮ್ಮತಿ ಸೂಚಿಸಿದರು. ಈ ವೇಳೆ ಅವರಿಗೆ ಪಂದ್ಯಾವಳಿಯ ಕರಪತ್ರ ನೀಡಲಾಯಿತು.
ಈ ವೇಳೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು.
ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಅವರನ್ನು ಭೇಟಿಯಾಗಿ ಆಹ್ವಾನಿಸಿದಾಗ ಅವರು, ‘10 ವರ್ಷಗಳ ಹಿಂದೆಯೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ದೇಶವನ್ನು ಶ್ಲಾಘಿಸಿ ಕೊಡಗಿನಲ್ಲಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದನ್ನು ಸ್ಮರಿಸಿಕೊಂಡರು. ಜೊತೆಗೆ, ಈ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರಲು ಸಮ್ಮತಿ ಸೂಚಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸಹಕಾರದಲ್ಲಿ ಇವರ ಭೇಟಿ ನಡೆಯಿತು.
ನಿಯೋಗದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಮಿತಿ ಅಧ್ಯಕ್ಷ ಸಿ.ಪಿ.ಕರುಂಬಯ್ಯ, ಕಾರ್ಯಾಧ್ಯಕ್ಷ ದೀನಾ ಚೇನಂಡ, ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎನ್.ಚೀಯಣ್ಣ, ವಿಶುಕುಟ್ಟಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.