ಮುಕ್ಕಾಟಿರ ಮೌನಿ ನಾಣಯ್ಯ ಅವರ ಕೊಡವ ಭಾಷೆಯ‘ಆ ಒರ್ ಬೈಟ್...?’ ಕಾದಂಬರಿಯನ್ನು ಸಮಾಜ ಸೇವಕ ಬಯವಂಡ ಮಹಾಬಲ ಪೂವಯ್ಯ ಮಡಿಕೇರಿಯಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಮಡಿಕೇರಿ: ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ ಎನಿಸಿದ ಕೊಡವ ಮಕ್ಕಡ ಕೂಟಕ್ಕೆ ಈಗ 12ರ ಹರೆಯ. 12 ವರ್ಷದಲ್ಲಿ 108 ಪುಸ್ತಕಗಳನ್ನು ಪ್ರಕಾಶನ ಮಾಡಿದ್ದ ಸಂಘಟನೆಯು ಮಂಗಳವಾರ 109ನೇ ಪುಸ್ತಕವನ್ನು ಪ್ರಕಾಶನ ಮಾಡುವ ಮೂಲಕ ವರ್ಷಾಚರಣೆ ಸಂಭ್ರಮಿಸಿತು.
ಇಲ್ಲಿನ ಪತ್ರಿಕಾ ಭವನದಲ್ಲಿ ಮುಕ್ಕಾಟಿರ ಮೌನಿ ನಾಣಯ್ಯ ಅವರ ಕೊಡವ ಭಾಷೆಯ ‘ಆ ಒರ್ ಬೈಟ್...?’ ಕಾದಂಬರಿಯನ್ನು ಸಮಾಜ ಸೇವಕ ಬಯವಂಡ ಮಹಾಬಲ ಪೂವಯ್ಯ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ‘ಕೊಡವ ಮಕ್ಕಡ ಕೂಟವು ಇಲ್ಲಿಯವರೆಗೆ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯ 109 ಪುಸ್ತಕಗಳನ್ನು ಪ್ರಕಾಶನ ಮಾಡಿರುವುದು ಮಾತ್ರವಲ್ಲ, ಮರೆತು ಹೋಗಿದ್ದ ಹಿರಿಯರನ್ನು ನೆನಪು ಮಾಡಿಕೊಡುವಂತಹ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ’ ಎಂದರು.
ಮುಖ್ಯವಾಗಿ, ಹಲವು ರಸ್ತೆಗಳಿಗೆ ಕೊಂಗಂಡ ಗಣಪತಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಕೊರವಂಡ ನಂಜಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. ಹಿರಿಯ ಸಾಧಕರ ಜಯಂತಿ ಆಚರಿಸುವುದು, ಅವರ ಪ್ರತಿಮೆಗಳನ್ನು ಅನಾವರಣಗೊಳಿಸುವಂತಹ ಕಾರ್ಯ ನಡೆಸುತ್ತಿದೆ ಎಂದರು.
ಇನ್ನು ಮುಂದೆಯೂ ಕೊಡಗಿನ ಸಂಸ್ಕೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸಾಹಿತಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರರಾದ ಐಚಂಡ ರಶ್ಮಿ ಮೇದಪ್ಪ ಮಾತನಾಡಿ, ‘ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಲೇಖಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕೊಡವ ಮಕ್ಕಡ ಕೂಟ ಕೊಡವ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಸಾಹಿತ್ಯ ಬೆಳವಣಿಗೆಗೂ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ಸೇವಕರಾದ ಚಿಯಕ್‌ಪೂವಂಡ ಸಚಿನ್ ಪೂವಯ್ಯ ಹಾಗೂ ಪೊನ್ನಚೆಟ್ಟಿರ ಪ್ರದೀಪ್ ಭಾಗವಹಿಸಿದ್ದರು.
ಕೊಡವ ಮಕ್ಕಡ ಕೂಟದಿಂದ ಮುಂದುವರಿದ ಪುಸ್ತಕ ಬಿಡುಗಡೆ ಕೊಡವ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯ ಪುಸ್ತಕಗಳು ಪ್ರಕಟ
ಸಿನಿಮಾವಾಗಲು ಸೂಕ್ತ ‘ಆ ಒರ್ ಬೈಟ್...?’
ಕಾದಂಬರಿ ಬಿಡುಗಡೆಯಾದ ಪುಸ್ತಕ ‘ಆ ಒರ್ ಬೈಟ್...?’ ಕುರಿತು ಎಲ್ಲರೂ ಮೆಚ್ಚುಗೆಯ ನುಡಿಗಳನ್ನಾಡಿದರು ಅಲ್ಲದೇ ಈ ಪುಸ್ತಕವು ಸಿನಿಮಾ ಆಗಲು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಪುಸ್ತಕದಲ್ಲಿ ಕೇವಲ ಕಥೆ ಮಾತ್ರವಿಲ್ಲ. ನಡುನಡುವೆ ಹಾಡುಗಳೂ ಇವೆ. ಓದುವುದಕ್ಕೆ ಮಾತ್ರವಲ್ಲ ಈ ಪುಸ್ತಕದ ಕಥೆಯ ಎಳೆಯನ್ನು ದೃಶ್ಯೀಕರಿಸಲೂ ಇದು ಸೂಕ್ತವಾಗಿದೆ ಎಂದು ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅಭಿಪ್ರಾಯಪಟ್ಟರು. ಪುಸ್ತಕದ ಲೇಖಕಿ ಮುಕ್ಕಾಟಿರ ಮೌನಿ ನಾಣಯ್ಯ ಮಾತನಾಡಿ ‘ಬದುಕಿನಲ್ಲಿ ಗೆಳೆತನ ಮತ್ತು ಪ್ರೀತಿಗೆ ಇರುವ ಅಗಾಧವಾದ ಶಕ್ತಿಯನ್ನು ತೋರಿಸುವ ಸುಂದರ ಚಿತ್ರಣ ಈ ಕೊಡವ ಕಾದಂಬರಿಯಲ್ಲಿದೆ’ ಎಂದರು. ಪ್ರೀತಿ ಸ್ನೇಹದ ಹೆಸರಿನಲ್ಲಿ ಮೋಸದ ಜಾಲಕ್ಕೆ ಸಿಲುಕಿ ನೊಂದು ಬೆಂದ ಯುವಪ್ರೇಮಿಗಳ ಕಥೆ ಇದರಲ್ಲಿದೆ. ಪವಿತ್ರ ಪ್ರೀತಿಗೆ ಯಾವತ್ತೂ ಸೋಲಿಲ್ಲ ಎನ್ನುವ ಅಂಶವನ್ನು ಚಿತ್ರಿಸಲಾಗಿದೆ. ಈ ಪುಸ್ತಕ ಸಿನಿಮಾ ಮಾದರಿಯಲ್ಲಿದ್ದು ಕಥೆಯ ಮಧ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಮೂರು ಹಾಡುಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪುಸ್ತಕ ಹೆಸರು: ಆ ಒರ್ ಬೈಟ್...?
ಲೇಖಕಿ: ಮುಕ್ಕಾಟಿರ ಮೌನಿ ನಾಣಯ್ಯ
ಪ್ರಕಾಶನ: ಕೊಡವ ಮಕ್ಕಡ ಕೂಟ
ಪುಟಗಳ ಸಂಖ್ಯೆ: 88
ಬೆಲೆ ₹ 150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.