ADVERTISEMENT

ಸಮೀಕ್ಷೆಯಲ್ಲಿ ಕೊಡವ ಧರ್ಮ ಎಂದೇ ನಮೂದಿಸಿ: ಅಜ್ಜಿನಿಕಂಡ ಮಹೇಶ್ ನಾಚಯ್ಯ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:48 IST
Last Updated 26 ಸೆಪ್ಟೆಂಬರ್ 2025, 4:48 IST
ಕಾರ್ಯಕ್ರಮದ ಪ್ರಯುಕ್ತ ಮೂರ್ನಾಡಿನಲ್ಲಿ ಮೆರವಣಿಗೆ ನಡೆಯಿತು
ಕಾರ್ಯಕ್ರಮದ ಪ್ರಯುಕ್ತ ಮೂರ್ನಾಡಿನಲ್ಲಿ ಮೆರವಣಿಗೆ ನಡೆಯಿತು   

ಮಡಿಕೇರಿ: ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕೊಡವ ಭಾಷಿಕರು ಜಾತಿಯಲ್ಲಿ ಕೊಡವ ಎಂದು, ಉಪ ಜಾತಿಯಲ್ಲಿ 21 ಸಮಾಜಗಳು ತಮ್ಮ ತಮ್ಮ ಉಪಜಾತಿ, ಧರ್ಮದಲ್ಲಿ ‘ಕೊಡವ’ ಎಂದು ನಮೂದಿಸಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮನವಿ ಮಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮೂರ್ನಾಡು ಕೊಡವ ಸಮಾಜದ ವತಿಯಿಂದ ಮೂರ್ನಾಡು ಕೊಡವ ಸಮಾಜದಲ್ಲಿ ಗುರುವಾರ ನಡೆದ ‘ಕೊಡವಾಮೆರ ಬಟ್ಟೆ-ಬೊಳಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡವ ಭಾಷಿಕರಲ್ಲಿ 21 ಸಮಾಜಗಳೂ ಒಟ್ಟುಗೂಡಿ ಕೊಡವ ಸಂಸ್ಕೃತಿ, ಸಾಹಿತ್ಯ, ಪರಂಪರೆ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ADVERTISEMENT

ಕೊಡವರಲ್ಲಿ ಸುಮಾರು 1,147 ಮನೆತನವಿದ್ದು, ಕೊಡವ ಭಾಷಿಕರು ಸೇರಿದಂತೆ ಒಟ್ಟು 2 ಸಾವಿರಕ್ಕೂ ಹೆಚ್ಚು ಮನೆತನಗಳಿವೆ. ಎಲ್ಲರೂ ಒಟ್ಟುಗೂಡಿ ಕೊಡವ ಸಂಸ್ಕೃತಿ, ಸಾಹಿತ್ಯ, ಕಲೆ, ಉಡುಗೆ ತೊಡುಗೆ ಭಾಷೆಯನ್ನು ಉಳಿಸಬೇಕು ಎಂದರು.

ಕೊಡವಾಮೆರ ಬಟ್ಟೆ ಬೊಳಿ ಎಂದರೆ ಬಂದಂತಹ ಹಾದಿಯನ್ನು ಮರೆಯದೆ, ನಶಿಸಿ ಹೋಗುತ್ತಿರುವುದನ್ನು ಬೆಳಕಿನೆಡೆಗೆ ನಡೆಸಿಕೊಂಡು ಹೋಗುವಂತಾಗಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಹೇಶ್ ನಾಚಯ್ಯ ಅವರು ಹೇಳಿದರು.

ನೆರವಂಡ ಅನೂಪ್ ಉತ್ತಯ್ಯ ಹಾಗೂ ಅವರೆಮಾದಂಡ ಸುಗು ಸುಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೊಮ್ಮಕ್ಕಡ ಕೂಟದವರು ಸ್ವಾಗತ ನೃತ್ಯ ಪ್ರದರ್ಶಿಸಿದರು. 

ಪುದಿಯೊಕ್ಕಡ ಕಾಶಿ ಕರುಂಬಯ್ಯ, ಗೌರಮ್ಮ ಮಾದಮ್ಮಯ್ಯ, ಪಳಂಗಂಡ ಮೇದಪ್ಪ, ಪೊನ್ನಚ್ಚಿರ ಎಸ್.ಮನೋಜ್, ಮಡೆಯಂಡ ಪೊನ್ನಪ್ಪ, ಪಳಂಗಡ ರೇಖಾ, ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ನಾಯಂದಿರ ಆರ್.ಶಿವಾಜಿ, ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಕುಡಿಯರ ಕಾವೇರಪ್ಪ, ಚೆಪ್ಪುಡಿರ ಉತ್ತಪ್ಪ, ನಾಪಂಡ ಸಿ.ಗಣೇಶ್, ನಾಯಕಂಡ ಬೇಬಿ ಚಿಣ್ಣಪ್ಪ, ಮೂರ್ನಾಡು ಕೊಡವ ಸಮಾಜದ ಭೂಮಿಕಾ, ರಮ್ಯ, ಕೌಶಿ, ಚೆಯ್ಯಂಡ ಬನಿತ್ ಬೋಜಣ್ಣ, ಚೆಂಗಂಡ ಸೂರಜ್ ತಮ್ಮಯ್ಯ, ಬಾಲಕೃಷ್ಣ ಭಾಗವಹಿಸಿದ್ದರು.

ಪ್ರಸಕ್ತ ಆಡಳಿತ ಮಂಡಳಿಯಿಂದ 12 ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ
ಕೊಂಡಿಜಮ್ಮನ ಬಾಲಕೃಷ್ಣ ಅಕಾಡೆಮಿ ಸದಸ್ಯ
ಕೊಡವ ಭಾಷಿಕರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು. ಸಾಮಾಜಿಕ ಶೈಕ್ಷಣಿಕ ಗಣತಿ ಸಂದರ್ಭದಲ್ಲಿ ಎಚ್ಚರವಹಿಸಿ ಧರ್ಮ ಜಾತಿ ಉಪಜಾತಿ ಬರೆಸಬೇಕು
ಕೊಕ್ಕಲೆಮಾಡ ಮಂಜು ಚಿಣ್ಣಪ್ಪಯೂಕೋ ಸಂಘಟನೆ.

‘ಕರಿಮರತ್ತ್ ಬೋಜ’ ಉಳಿಸಿ ಬೆಳೆಸಿ

ವಿಚಾರ ಮಂಡಿಸಿದ ಪಾಲೆಂಗಡ ಅಮಿತ್ ಭೀಮಯ್ಯ ಮಾತನಾಡಿ ‘ಕರಿಮರತ್ತ್ ಬೋಜ’ ಈ ಮರವನ್ನು ಬೆಳಕಿರದಂತಹ ಜಾಗದಲ್ಲಿ ಬೆಳೆಯಲಾಗುತ್ತದೆ. ಈ ಮರವು 20 ರಿಂದ 28 ಮೀಟರ್ ಉದ್ದ ಬೆಳೆಯುತ್ತದೆ. ಇದರ ಬೀಜವನ್ನು ಚರ್ಮ ರೋಗಕ್ಕೆ ಬಳಸಲಾಗುತ್ತದೆ ಎಂದರು. ಇದಕ್ಕೆ ಕೊಡಗಿನಲ್ಲಿ ಉತ್ತಮ ಸ್ಥಾನವಿದ್ದು ಈ ಮರಕ್ಕೆ ಸಿಡಿಲು ಬಡಿಯುವುದಿಲ್ಲ. ಯಾವುದೇ ನಕರಾತ್ಮಕ ಶಕ್ತಿ ಜೊತೆಗೆ ಕ್ರಿಮಿಕೀಟಗಳು ಮುಟ್ಟುವುದಿಲ್ಲ. ಇದಕ್ಕೆ ಕೊಡವರು ದೇವರ ಸ್ಥಾನವನ್ನು ನೀಡಿ ಪೂಜಿಸುತ್ತಾರೆ. ಕರಿಮರದ ಗಿಡವನ್ನು ನಾವು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವಂತಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.