ADVERTISEMENT

ಕಾಂಗ್ರೆಸ್ ಬರ್ಬಾದ್‌ ಮಾಡುವ ಸಮಾವೇಶ: ಸಚಿವ ಕೆ.ಎಸ್‌.ಈಶ್ವರಪ್ಪ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಜನಸ್ವರಾಜ್‌ ಸಮಾವೇಶದಲ್ಲಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 11:04 IST
Last Updated 22 ನವೆಂಬರ್ 2021, 11:04 IST
   

ಮಡಿಕೇರಿ: ‘ಕಾಂಗ್ರೆಸ್‌ ಅನ್ನು ರಾಜ್ಯದಲ್ಲಿ ಬರ್ಬಾದ್ ಮಾಡುವ ಸಮಾವೇಶ ಇದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಗರದಲ್ಲಿ ಸೋಮವಾರ ತಿರುಗೇಟು ನೀಡಿದರು.

‘ಜನಸ್ವರಾಜ್‌ ಸಮಾವೇಶ ಅಲ್ಲ; ಜನರ ಬರ್ಬಾದ್‌ ಯಾತ್ರೆ’ ಎಂಬ ಸಿದ್ದರಾಮಯ್ಯ ಅವರ ಟೀಕೆಗೆ ಪ್ರಕ್ರಿಯಿಸಿ, ‘ರಾಷ್ಟ್ರದಲ್ಲಿಯೇ ಕಾಂಗ್ರೆಸ್ ಪಕ್ಷ ಮಾಯವಾಗಿದೆ. ಕಾಂಗ್ರೆಸ್‌ ಅನ್ನು ಜನ ತಿರಸ್ಕಾರ ಮಾಡಿದ್ದಾರೆ. ಅದು ಪ್ರಾದೇಶಿಕ ಪಕ್ಷವಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ಅದೂ ಯಾವಾಗ ಒಡೆದು ಹೋಗಲಿದೆಯೋ ತಿಳಿದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಅವರ ಸ್ವಾರ್ಥ ರಾಜಕಾರಣಕ್ಕೆ ಬೇಸತ್ತು ಅನೇಕ ನಾಯಕರು ಪಕ್ಷ ಬಿಡಲು ಸಿದ್ಧರಿದ್ದಾರೆ. ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು, ಸಿ.ಎಂ ಸ್ಥಾನ ಕಳೆದುಕೊಂಡರೂ ಬುದ್ಧಿ ಬಂದಿಲ್ಲ’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ದ್ರಾಕ್ಷಿ ಕೈಗೆ ಸಿಗದಿರುವಾಗ ಹುಳಿ ಎಂಬಂತೆ ಸಿದ್ದರಾಮಯ್ಯ ನಡವಳಿಕೆ ಇದೆ. ಸಿದ್ದರಾಮಯ್ಯ ಲಾಬಿ ನಡೆಸಲು ಯಾರನ್ನು ಜೊತೆಗೆ ಇಟ್ಟುಕೊಂಡಿದ್ದರು ಗೊತ್ತಿದೆ. ಅಧಿಕಾರವಿಲ್ಲದ ಕಾರಣಕ್ಕೆ ಏನೇನೋ ಹೇಳಿಕೆ ನೀಡುತ್ತಾರೆ’ ಎಂದು ಟೀಕಿಸಿದರು.

ಸಮಾವೇಶದಲ್ಲಿ ಭಾಗವಹಿಸಿದ ಮಹಿಳೆಯರು

‘ರೈತರ ಅಪೇಕ್ಷೆಯಂತೆ ನಡೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ. ಆಯಾ ರಾಜ್ಯಕ್ಕೆ ಸೂಕ್ತವಾದ ಕಾಯ್ದೆಗಳನ್ನು ಜಾರಿಗೆ ತಂದುಕೊಳ್ಳಬಹುದು. ಕೇಂದ್ರವು ಸಹಕಾರ ನೀಡಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.