ಕುಶಾಲನಗರ ನೂತನ ಪುರಸಭೆ ಕಚೇರಿ
ಕುಶಾಲನಗರ: ಕಳೆದ 7 ವರ್ಷಗಳ ಹಿಂದೆ ಆರಂಭಗೊಂಡು ಆಮೆಗತಿಯಲ್ಲಿ ಸಾಗಿಬಂದ ಪುರಸಭೆ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಯು ಇದೀಗ ಬಹುತೇಕ ಪೂರ್ಣಗೊಂಡಿದ್ದು, ಜೂನ್ 11ರಂದು ಲೋಕಾರ್ಪಣೆಗೆ ಸಿದ್ದಗೊಂಡಿದೆ.
ಪಟ್ಟಣದ ಹೃದಯ ಭಾಗದಲ್ಲಿದ್ದ ಪಟ್ಟಣ ಪಂಚಾಯಿತಿಯ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ₹ 7.5 ಕೋಟಿ ವೆಚ್ಚದಲ್ಲಿ ನೂತನ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಕಾಮಗಾರಿ ಬಹುತೇಕ ಮುಗಿದಿದೆ.
2018ರಲ್ಲಿ ಹಳೆಯ ಕಟ್ಟಡ ನೆಲಸಮ ಮಾಡಿ 2020ಕ್ಕೆ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿಯಾಗಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಳವಾದ ಕಾರಣ ಅನುದಾನದ ಕೊರತೆಯಿಂದಾಗಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ.
ಆರಂಭದಲ್ಲಿ ₹ 4.5 ಕೋಟಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿತು. ಆದರೆ, ಗುತ್ತಿಗೆದಾರ ₹ 2.30 ಕೋಟಿಯಷ್ಟು ಕೆಲಸ ಮಾಡಿದ ನಂತರ ಸ್ಥಳ ವಿವಾದ ಕುರಿತು ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತು.
ನಂತರ, ಅಪ್ಪಚ್ಚುರಂಜನ್ ಶಾಸಕರಾಗಿದ್ದ ಅವಧಿಯಲ್ಲಿ ₹ 2.87 ಕೋಟಿ ಮಂಜೂರಾಗಿ ಕೆಲಸ ಆರಂಭಗೊಂಡಿತ್ತು. ಇದೀಗ ಶಾಸಕ ಡಾ.ಮಂತರ್‌ಗೌಡ ₹ 1.9 ಕೋಟಿ ಅನುದಾನ ತಂದು ಪುರಸಭೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
1.10 ಎಕರೆ ಪ್ರದೇಶದಲ್ಲಿ ನೂತನ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ನೆಲ ಅಂತಸ್ತಿನಲ್ಲಿ 150 ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಹಿಂದಿನ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಅವರು ಕುಶಾಲನಗರ ಪುರಸಭೆಯಾಗಿ ರೂಪುಗೊಂಡ ಸಂದರ್ಭದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ, 6 ದಶಕಗಳ ಕಾಲ ವಿವಿಧ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿದ್ದು, ಪಟ್ಟಣದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ನೂತನ ವಾಣಿಜ್ಯ ಸಂಕೀರ್ಣ ಪಟ್ಟಣದ ಚಿತ್ರಣವನ್ನೇ ಬದಲಿಸಲಿದೆ. ನೂತನ ಸಂಕೀರ್ಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ, ಎಂಜಿನಿಯರ್, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕಚೇರಿಗಳು, ಸಭಾಂಗಣ ನಿರ್ಮಾಣಗೊಂಡಿದೆ. ಈ ಹೊಸ ಕಟ್ಟಡ ಸುಸೂತ್ರ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಜನರಲ್ಲಿದೆ.
ಇತಿಹಾಸ ಪುಟ ಸೇರಿದ ಪಟ್ಟಣ ಪಂಚಾಯಿತಿ
ಕಚೇರಿ 1958ರಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡ ಪುರಸಭೆ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಕಚೇರಿಯಾಗಿತ್ತು. 2018ರಲ್ಲಿ ಕಟ್ಟಡವನ್ನು ನೆಲಸಮ ಮಾಡಿದ್ದರಿಂದ ಅದು ಇತಿಹಾಸದ ಪುಟ ಸೇರಿತು. ಸುಬೇದಾರರ ಆಳ್ವಿಕೆ ಕಾಲದಿಂದ ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡು ಸಾರ್ವಜನಿಕರ ಒತ್ತಡ ಹಾಗೂ ಹೋರಾಟದ ಕಾರಣ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಈಗಿನ ಜನಸಂಖ್ಯೆ ಆಧಾರಕ್ಕೆ ಅನುಗುಣವಾಗಿ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನು ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಸಾಯಿ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.
ಪುರಸಭೆ ಕಟ್ಟಡ ಕಾಮಗಾರಿಗೆ ₹ 2 ಕೋಟಿ ವಿಶೇಷ ಅನುದಾನ ತಂದು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಜೂನ್ 11ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಉದ್ಘಾಟಿಸಲಿದ್ದಾರೆ– ಡಾ.ಮಂತರ್‌ಗೌಡ, ಶಾಸಕ
ಪುರಸಭೆ ಕಚೇರಿ ಕಾಮಗಾರಿ ಬಹುತೇಕ ಪೂರ್ಣಗೊಂದಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಸಾವಿರಾರು ಹಣ ಖರ್ಚು ಮಾಡಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುವುದರಿಂದ ಮುಕ್ತಿ ಸಿಕ್ಕಿದೆಜಯಲಕ್ಷ್ಮಿಚಂದ್ರು, ಅಧ್ಯಕ್ಷೆ, ಪುರಸಭೆ ಕುಶಾಲನಗರ
ಆಧುನಿಕ ಸೌಲಭ್ಯಗಳ ಸುಸಜ್ಜಿತ ಕಟ್ಟಡದ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ. ಶಾಸಕ ಡಾ.ಮಂತರ್‌ಗೌಡ ಅವರ ಪ್ರಯತ್ನದಿಂದ ಹೆಚ್ಚುವರಿ ₹ 2 ಕೋಟಿ ವಿನಿಯೋಗಿಸಿ ಪರಿಪೂರ್ಣ ಬಳಕೆಗೆ ಕಟ್ಟಡವನ್ನು ಸಜ್ಜುಗೊಳಿಸಲಾಗಿದೆ.ವಿ.ಪಿ.ಶಶಿಧರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.