ADVERTISEMENT

ಸೆಸ್ಕ್‌: ಕಾಮಗಾರಿಗಳಿಗೆ ₹40.34 ಕೋಟಿ ಅನುದಾನ

ಕುಶಾಲನಗರ: ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:45 IST
Last Updated 24 ಜನವರಿ 2026, 6:45 IST
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಯಿತು
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆಯಿತು   

ಕುಶಾಲನಗರ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯು ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮೊದಲಿಗೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅನುಪಾಲನಾ ವರದಿ ಕುರಿತು ಚರ್ಚೆ ನಡೆಸಿದರು.

‘ತಾಲ್ಲೂಕಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಭಾಗಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹40.34 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ವಿವಿಧೆಡೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ, ಹಳೆಯ ಹಾಗೂ ಹಾನಿಯಾಗಿರುವ ವಿದ್ಯುತ್ ಕಂಬಗಳ ಬದಲಾವಣೆ, ವಿದ್ಯುತ್ ಕೇಬಲ್ ಲೇನ್ ಅಳವಡಿಕೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಸೆಸ್ಕ್‌ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಸರ್ಕಾರಿ ಪಿಎಂಶ್ರೀ ಸರ್ಕಾರಿ ಶಾಲೆ ಮುಂಭಾಗದ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಹೇಳಿದರು.

‘ಹೆಬ್ಬಾಲೆ ಗ್ರಾಮದಲ್ಲಿ ಸೆಸ್ಕ್ ಸಹಾಯಕ ಎಂಜಿನಿಯರ್ ಶಾಖಾ ಕಚೇರಿ ಆರಂಭಿಸಲು ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾಪ ವಿಚಾರ ಏನಾಯಿತು’ ಎಂದು ಸಹಾಯಕ ಎಂಜಿನಿಯರ್ ನೀತಾ ಅವರನ್ನು ಶಶಿಧರ್ ಪ್ರಶ್ನಿಸಿದರು.

‘ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮ ಕೈಗೊಂಡಿದ್ದು, ಕಡತವು ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿದ್ದು, ಶೀಘ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ’ ಎಂದರು.

‘ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸುವುದು ಬೇಡ. ಏಕೆಂದರೆ ಈಗಾಗಲೇ ಸರ್ಕಾರಿ ಶಾಲೆಯಲ್ಲೂ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಗೊಂಡಿದ್ದು, ಯಾವುದೇ ಗೊಂದಲ ಹಾಗೂ ಮಕ್ಕಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀದೇವಿಗೆ ಅವರಿಗೆ ನಿರ್ದೇಶಿಸಿದರು.

‘ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಸಿಮೆಂಟ್ ಕಾರ್ಖಾನೆ ಬಳಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಆಹಾರ ಸಂಸ್ಕರಣಾ ಘಟಕವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸೂಚಿಸಿದರು. ಈಗಾಗಲೇ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಶ್ರೀದೇವಿ ಉತ್ತರಿಸಿದರು.

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಾಹ್ನ ಸುಂದರನಗರದವರೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಶಶಿಧರ್ ಹೇಳಿದರು.

ಮಡಿಕೇರಿ ಡಿಪೋ ವ್ಯವಸ್ಥಾಪಕ ಈರ್ಸಾಪ್ಪ ‘ಇಲ್ಲಿನ ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ವಾರದಿಂದಲೇ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಉತ್ತರಿಸಿದರು‌.

ಇಲ್ಲಿನ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದು, ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್, ಮಾಲ್‌ನೊಂದಿಗೆ ವಿವಿಧ ಸೌಲಭ್ಯಗಳನ್ನು ಹೊಂದಿರುವ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಜೊತೆಗೆ ವಿಭಾಗಾಧಿಕಾರಿ ಕಚೇರಿ ತೆರಯಲು ಒತ್ತಾಯಿಸಲಾಗುತ್ತದೆ’ ಎಂದರು.

ಯುವನಿಧಿ ಫಲಾನುಭವಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ
ಮಂಜುನಾಥ್ ಅವರನ್ನು ಶಶಿಧರ್ ತರಾಟೆಗೆ ತೆಗೆದುಕೊಂಡರು. ‘ಹಾರಿಕೆ ಉತ್ತರ ನೀಡಬೇಡಿ, ದಾಖಲೆ ಸಮೇತ ಉತ್ತರ ನೀಡಿ’ ಎಂದು ಸೂಚಿಸಿದರು.

ಆಹಾರ ನಿರೀಕ್ಷಕಿ ಸ್ವಾತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಶಿಭೀಮಯ್ಯ, ತಾಲ್ಲೂಕು ಪಂಚಾಯತಿ ಇಒ ಪರಮೇಶ್ ಕುಮಾರ್, ಸಮಿತಿ ಸದಸ್ಯರಾದ ಬಿ.ಸಿ.ಮಲ್ಲಿಕಾರ್ಜುನ, ಅಬ್ದುಲ್ ರಜಾಕ್, ಜೆ.ಫಿಲೋಮಿನಾ, ಎಚ್.ಎನ್.ರಾಜಶೇಖರ್, ಎಸ್.ಎ.ಶ್ರೀನಿವಾಸ, ಶ್ರೀನಿವಾಸ್ ಕುಮಾರ್, ರಫಿಕ್ ಖಾನ್, ಕಿಶೋರ್ ಹಾಗೂ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.