
ಪ್ರಜಾವಾಣಿ ವಾರ್ತೆ
ಕುಶಾಲನಗರ: ಇಲ್ಲಿನ ಪುರಸಭೆಗೆ ಡೆಲ್ಟ್ ಯೋಜನೆಯಡಿ ₹5.5 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನದಲ್ಲಿ ಕೊಪ್ಪ ಕಾವೇರಿ ಸೇತುವೆಯಿಂದ ತಾವರೆ ಕೆರೆವರೆಗೆ ಹಾಗೂ ಡಿಸಿಸಿ ಬ್ಯಾಂಕ್‌ನಿಂದ ಐಬಿವರೆಗೆ ರಸ್ತೆಯ ಎರಡು ಬದಿಗಳಲ್ಲಿ ಅಗತ್ಯ ಚರಂಡಿ, ಪಾದಚಾರಿ ಮಾರ್ಗ ಹಾಗೂ ವಿದ್ಯುದ್ದೀಕರಣ ಯೋಜನೆ ಅನುಷ್ಠಾನ ತರಲು ಗುರುವಾರ ನಡೆದ ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರಸಭೆಯ 2026- 27ನೇ ಸಾಲಿನ ಬಜೆಟ್ ಸಿದ್ಧತೆ ಅಂಗವಾಗಿ ಪುರಸಭೆಯ ಆಡಳಿತಾಧಿಕಾರಿಯಾದ ಜಿಲ್ಲಾ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಂಘಸಂಸ್ಥೆಗಳ ಮುಖಂಡರ ಸಲಹೆ ಸ್ವೀಕರಿಸಲಾಯಿತು.
ಪಟ್ಟಣದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಗ್ರಂಥಾಲಯ ನಿರ್ಮಾಣ ಮಾಡುವಂತೆ ಆಡಳಿತಾಧಿಕಾರಿ ನಿತಿನ್ ಮುಖ್ಯಾಧಿಕಾರಿಗೆ ಸಲಹೆ ನೀಡಿದರು.
ಹಿರಿಯ ನಾಗರಿಕರು ಒಳಗೊಂಡಂತೆ ಸಾರ್ವಜನಿಕರಿಗೆ ಉಪಯೋಗ ಆಗುವ ಉತ್ತಮ ಗ್ರಂಥಾಲಯ ನಿರ್ಮಿಸಿ ಪುಸ್ತಕ, ದಿನಪತ್ರಿಕೆ ವಾಚಿಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು.
‘ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿನ ಆರು ಎಕರೆ ವಿಸ್ತಾರವಾದ ಭೂಪ್ರದೇಶವನ್ನು ಅನ್ಯ ಉದ್ದೇಶಗಳಿಗೆ ಬಳಸದೇ ಸಾರ್ವಜನಿಕ ಬಳಕೆಯ ದೃಷ್ಟಿಯಿಂದ ಮೀಸಲಿರಿಸಿ ಸಂರಕ್ಷಣೆ ಮಾಡಬೇಕು’ ಎಂದು ಕುಡಾ ಮಾಜಿ ಅಧ್ಯಕ್ಷ ಎಂ.ಎಂ.ಚರಣ್ ಹೇಳಿದರು.
‘ಕುಶಾಲನಗರದಲ್ಲಿ ಹೆದ್ದಾರಿಯ ಉದ್ದಕ್ಕೂ ವೈಜ್ಞಾನಿಕವಾಗಿ ವಿದ್ಯುದ್ದೀಕರಣಗೊಳಿಸಬೇಕು. ನಗರದ ಹಿತದೃಷ್ಟಿಯಿಂದ ವಾಕ್ಯೂಮ್ ಕ್ಲೀನರ್ ಟ್ರಕ್ ಖರೀದಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಕುಶಾಲನಗರದಲ್ಲಿ ಆಯ್ದ ಕಡೆ ವೃತ್ತಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು’ ಎಂದು ಪುರಸಭೆ ಮಾಜಿ ಸದಸ್ಯ ಆನಂದಕುಮಾರ್ ಸಲಹೆ ನೀಡಿದರು.
‘ಬಸವೇಶ್ವರ ಬಡಾವಣೆ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳಿಗೆ ವಿಶೇಷ ಅನುದಾನ ಮೀಸಲಿಡಬೇಕು’ ಎಂದು ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ಹೇಳಿದರು.
‘ಶ್ರದ್ಧಾಂಜಲಿ ವಾಹನದ ಮಾದರಿಯಲ್ಲಿ ಸಾರ್ವಜನಿಕವಾಗಿ ಅನುಕೂಲವಾಗುವಂತೆ ಮಿನಿ ಜೆಸಿಬಿ ಖರೀದಿಗೆ ಅನುದಾನ ಮೀಸಲಿಡಬೇಕು. ಪೂನಂ ಬಡಾವಣೆಯಿಂದ ಗುಂಡೂರಾವ್ ಬಡಾವಣೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು’ ಮಾಜಿ ಸದಸ್ಯ ಡಿ.ಕೆ.ತಿಮ್ಮಪ್ಪ ಹೇಳಿದರು.
‘ನಗರದಲ್ಲಿರುವ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಹಿರಿಯ ನಾಗರಿಕರಿಗೆ, ಮಹಿಳೆಯರು ಹಾಗೂ ಮಕ್ಕಳಿಗೆ ಅನುವು ಮಾಡಿಕೊಡಬೇಕು. ಕಾವೇರಿ ಬಡಾವಣೆಯ ಉದ್ಯಾನವನ್ನು ಅಭಿವೃದ್ಧಿಗೊಳಿಸಬೇಕೆಂದು’ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಒತ್ತಾಯಿಸಿದರು.
‘ನಗರದ ವ್ಯಾಪ್ತಿಯಲ್ಲಿ ಕಂಡ ಕಂಡಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಆಯ್ದ ಕಡೆ ಜಾಗ ಗುರುತಿಸಬೇಕು.
ಮಾಂಸದ ಅಂಗಡಿಗಳನ್ನು ಕೂಡ ಪ್ರತ್ಯೇಕ ಸ್ಥಳದಲ್ಲಿ ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಕೆ.ಜಿ.ಮನು ಆಗ್ರಹಿಸಿದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಇದ್ದರು.
Cut-off box - ‘ವಿವಿಧ ಅಭಿವೃದ್ಧಿ ಯೋಜನೆಗೆ ಸಿದ್ಧತೆ’ ‘ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಮೇಲು ಸೇತುವೆ ನಿರ್ಮಾಣ ಮುಖ್ಯ ವೃತ್ತಗಳಲ್ಲಿ ಹೈ ಮಾಸ್ಕ್ ಲೈಟುಗಳ ಅಳವಡಿಕೆ ವಿದ್ಯುತ್ ಚಿತಾಗಾರ ವೆಂಕಟೇಶ್ವರ ಚಿತ್ರಮಂದಿರದ ಜಾಗ ಹಾಗೂ ಕಾವೇರಿ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ಪ್ರತಿ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಗುರಿ ಹೊಂದಲಾಗಿದೆ. ಈಗಾಗಲೇ 2026-27ನೇ ಸಾಲಿನಲ್ಲಿ ₹2361 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು ₹208440 ಲಕ್ಷ ವೆಚ್ಚದ ಪಟ್ಟಿ ಸಿದ್ದಪಡಿಸಲಾಗಿದೆ. ನಗರದ ಸಾರ್ವಜನಿಕರ ಸಲಹೆ ಸ್ವೀಕರಿಸಿ ಆಯ್ದ ಅಭಿವೃದ್ಧಿ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುತ್ತದೆ’ ಎಂದು ಮುಖ್ಯಾಧಿಕಾರಿ ಗಿರೀಶ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.