
ಮಡಿಕೇರಿ: ನಗರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕು, ಈಗ ಇರುವ ಪುತ್ಥಳಿ ಜಾಗದ ಆವರಣದಲ್ಲಿ ಉದ್ಯಾನ ನಿರ್ಮಿಸಬೇಕು ಎಂಬ ಒತ್ತಾಯಗಳು ಇಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಳಿ ಬಂತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಹಾಗೂ ಕುವೆಂಪು ಅವರ ಕುಟುಂಬದ ಸಂಬಂಧಿಕರೂ ಆದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ, ‘ರಾಷ್ಟ್ರಕವಿ ಕುವೆಂಪು ಅವರ ಈಗಿರುವ ಪ್ರತಿಮೆ ಜಾಗದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.
ಕುವೆಂಪು ಅವರ ಮಂತ್ರ ಮಾಂಗಲ್ಯ ಸರಳ ವಿವಾಹವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕು ಕಾಣಬಹುದು. ಮುಂದಿನ ಬಾರಿ ಕುಶಾಲನಗರದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಎಚ್.ಎಲ್.ದಿವಾಕರ ಮಾತನಾಡಿ, ‘ಕುವೆಂಪು ಪ್ರತಿಮೆ ಇರುವ ಜಾಗವನ್ನು ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಅವರು ಸಲಹೆ ನೀಡಿದರು.
ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ಕುವೆಂಪು ಅವರ ಬರಹಗಳಲ್ಲಿ ಹೊಸ ಹೊಸ ಆಲೋಚನೆಗಳು ಹಾಗೂ ವೈಚಾರಿಕತೆಯನ್ನು ಕಾಣಬಹುದು’ ಎಂದರು.
ಮುಖಂಡ ಮೋಹನ್ ಮೌರ್ಯ ಮಾತನಾಡಿ, ‘ಕುವೆಂಪು ಅವರ ಆದರ್ಶ ಹಾಗೂ ಆಶಯಗಳನ್ನು ಅವರ ಬರಹಗಳ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಕುವೆಂಪು ಅವರ ರಾಮಾಯಣ ದರ್ಶನಂ ಕುರಿತು ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ಗಣ್ಯರು ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಸಾಹಿತಿ ಉ.ರಾ.ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ಭಾಗವಹಿಸಿದ್ದರು.
ಶಿಕ್ಷಕಿ ಜಯಲಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಡಿಸಿಸಿ ಬ್ಯಾಂಕ್ ಬಳಿಯಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ತಹಶೀಲ್ದಾರ್ ಶ್ರೀಧರ, ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಕೇಶವ ಕಾಮತ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್, ಅಂಬೆಕಲ್ಲು ನವೀನ್, ಪೌರಾಯುಕ್ತ ಎಚ್.ಆರ್.ರಮೇಶ್, ಆರ್.ಪಿ.ಚಂದ್ರಶೇಖರ್, ಮೋಹನ್ ಕುಮಾರ್ ಇತರರು ಪುಷ್ಪನಮನ ಸಲ್ಲಿಸಿದರು.
ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ರಾಮಾಯಣ ದರ್ಶನಂ’ ಕುರಿತು ಚಿತ್ರಕಲಾ ಸ್ಪರ್ಧೆ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿ ಹಲವು ಸಾಹಿತಿಗಳು ಭಾಗಿ
‘ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ‘ಸಮಾಜದಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಂಬುದನ್ನು ಕುವೆಂಪು ಅವರು ಸಾರಿದ್ದಾರೆ’ ಎಂದು ಹೇಳಿದರು. ಜಾತಿ ಮತ ಪಂಥದ ಗಡಿ ದಾಟಿರುವುದು ಅವರ ಕಾವ್ಯ ಕವನ ಕೃತಿಗಳಲ್ಲಿ ಕಾಣಬಹುದು. ಪ್ರತಿಯೊಬ್ಬರೂ ಹುಟ್ಟುವಾಗ ವಿಶ್ವಮಾನವರಾಗಿ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂಬುದನ್ನು ಕುವೆಂಪು ಅವರು ಸಾರಿದ್ದಾರೆ ಎಂದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಂದೇಶ ಸಾರಿದ್ದು ಕುವೆಂಪು ಅವರ ಪರಿಕಲ್ಪನೆಯಲ್ಲಿ ಎಲ್ಲರೂ ನಡೆಯಬೇಕು ಎಂದರು.
‘ಕುವೆಂಪು ಸಾಹಿತ್ಯ ಲೋಕದ ವಿಸ್ಮಯ’
ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮಾತನಾಡಿ ‘ರಾಷ್ಟ್ರಕವಿ ಕುವೆಂಪು ಅವರು ಯುಗದ ಕವಿ ಜಗದ ಕವಿ ರಸ ಋಷಿಗಳ ಕವಿಯಾಗಿದ್ದು ಕನ್ನಡ ಸಾಹಿತ್ಯ ಲೋಕದ ವಿಸ್ಮಯ’ ಎಂದು ಪ್ರತಿಪಾದಿಸಿದರು. ಕುವೆಂಪು ಅವರ ವಿಚಾರಧಾರೆಗಳನ್ನು ತಿಳಿದುಕೊಂಡಲ್ಲಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಜಾತಿ ಧರ್ಮ ಪಂಥಗಳನ್ನು ಬಿಟ್ಟು ಎಲ್ಲರೂ ವಿಶ್ವ ಪಥದಲ್ಲಿ ಸಾಗಬೇಕು ಎಂದು ಹೇಳಿದ್ದಾರೆ ನವೀಲು ಪಕ್ಷಿಕಾಶಿ ಶೂದ್ರ ತಪಸ್ವಿ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದು ಕುವೆಂಪು ಅವರಿಗೆ ಪ್ರಶಸ್ತಿಗಳು ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.