ಸಿದ್ದಾಪುರ: ‘ಕೊಡಗಿನ ತೋಟದ ಲೈನ್ ಮನೆ, ಬಾಡಿಗೆ ಮನೆ, ನದಿ ತೀರಗಳಲ್ಲಿ ನೂರಾರು ಕಾರ್ಮಿಕರು 7-8 ದಶಕಗಳಿಂದ ನಿವೇಶನ ಇಲ್ಲದೇ ವಾಸಿಸುತ್ತಿದ್ದು, ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ನಿರ್ಧಾರ ಬಡಜನರ ಮನೆಯ ಕನಸಿಗೆ ಕೊಡಲಿ ಪೆಟ್ಟು ನೀಡಲಿದೆ’ ಎಂದು ಸಿಪಿಐ ಹಾಸನ ಜಿಲ್ಲಾ ಕಾರ್ಯದರ್ಶಿ ಸಿ.ಧರ್ಮರಾಜ್ ಅಭಿಪ್ರಾಯಪಟ್ಟರು.
ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ 4ನೇ ಕೊಡಗು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿದ ಅವರು ಮಾತನಾಡಿ, ‘ತುತ್ತು ಅನ್ನಕ್ಕೂ ಜಿಎಸ್‌ಟಿ ವಿಧಿಸುವ ಮೂಲಕ ಸರ್ಕಾರ ಮಧ್ಯಮ ವರ್ಗವನ್ನು ಬಡತನ ರೇಖೆಗಿಂತ ಕೆಳಕ್ಕೆ ತಳ್ಳುತ್ತಿದೆ’ ಎಂದು ಆರೋಪಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್ ಮಾತನಾಡಿ, ‘ಕೊಡಗಿನಲ್ಲಿ ಆನೆ ಸೇರಿದಂತೆ ವನ್ಯ ಪ್ರಾಣಿ- ಮಾನವ ಸಂಘರ್ಷ ತಾರಕಕ್ಕೇರಿದ್ದು, ರೈತರ ಬೆಳೆ ನಾಶಕ್ಕೆ ಸಕಾಲದಲ್ಲಿ ಸೂಕ್ತ ಪರಿಹಾರ ನೀಡಬೇಕು. ಆನೆ ದಾಳಿಗೆ ಮೃತಪಟ್ಟ ಸಂದರ್ಭ ₹40 ಲಕ್ಷ ಪರಿಹಾರ ಮತ್ತು ಕುಟುಂಬ ಸದಸ್ಯನಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಿಬೇಕು. ಅಂಗ ವಿಕಲರಿಗೆ ₹5 ಲಕ್ಷ ಪರಿಹಾರ ಮತ್ತು ಅರಣ್ಯ ಇಲಾಖೆಯಿಂದ ವಿಶೇಷ ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
‘ಶಾಸಕರು ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ಪ್ರವಾಹ ಸಂತ್ರಸ್ಥರ ನಿವೇಶನ, ಆದಿವಾಸಿ, ಬುಡಕಟ್ಟು ಜನಾಂಗಕ್ಕೆ ನಿವೇಶನ ಒದಗಿಸುವುದು, ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
ದಲಿತ ರೈಟ್ಸ್ ಮೂವ್‌ಮೆಂಟ್‌ನ ರಾಜ್ಯ ಸಮಿತಿ ಸದಸ್ಯ ರಮೇಶ್ ಮಾಯಮುಡಿ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ರಫೀಕ್ ನವಲಗುಂದ, ಸಹ ಕಾರ್ಯದರ್ಶಿಯಾಗಿ ಎನ್. ಮಣಿ, ಜೆ.ಆರ್. ಸುರೇಶ್ ಖಜಾಂಚಿಯಾಗಿ ಕೆ. ಸೀತಾರಾಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪುಷ್ಪ, ಶಾಂತಿ, ಶಬಾನಾ, ಮಂಜುಳಾ, ಸಿದ್ದ, ರಮೇಶ್ ಮಾರ್ಗೋಲಿ, ಕೆ.ವಿ. ಸುನಿಲ್ ಹಾಗೂ ರಮೇಶ್ ಮಾಯಮುಡಿ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಶಾಖೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.