
ಸೋಮವಾರಪೇಟೆ: ಸೆಟಲ್ಮೆಂಟ್ ಸರ್ವೆ ಮಾಡಿ ಪ್ರತಿ ಗ್ರಾಮಗಳಲ್ಲಿ ಗಡಿ ಗುರುತು ಮಾಡಬೇಕು. ವಿಳಂಬ ಮಾಡದೆ ರೈತರಿಗೆ ಹಕ್ಕಪತ್ರ ವಿತರಿಸಬೇಕೆಂದು ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಕೃಷ್ಣಮೂರ್ತಿ ಅವರನ್ನು ಸೋಮವಾರ ಕಚೇರಿಯಲ್ಲಿ ಭೇಟಿಯಾಗಿ ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಕೊತ್ನಳ್ಳಿ ಅರುಣ್ ಕುಮಾರ್ ಮಾತನಾಡಿ, ‘ರೈತರು ತಾಲ್ಲೂಕು ಕಚೇರಿಗೆ ಬಂದಾಗ, ಅವರಿಗೆ ಸೂಕ್ತ ಸಮಯದಲ್ಲಿ ಕೆಲಸ ಮಾಡಿಕೊಡುವಂತೆ ಸಿಬ್ಬಂದಿಗೆ ಸೂಚಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ಮ ‘ಈಗಾಗಲೇ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಸಮಸ್ಯೆಗಳಿದ್ದರೆ ರೈತರು ನನ್ನನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದರು.
‘ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆಯಂತೆ ರೈತರ ಜಾಗದ ಪೋಡಿ ದುರಸ್ತಿಗೆ ಸಂಬಂಧಪಟ್ಟಂತೆ ಇದ್ದಂತ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಜಾಗದ ದುರಸ್ತಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಂದು ಸಾವಿರ ಅರ್ಜಿಗಳ ದಾಖಲಾತಿಗಳನ್ನು ಕ್ರೋಡಿಕರಿಸಿ, ಮುಂದಿನ ಕ್ರಮಕ್ಕಾಗಿ ಎಡಿಎಲ್ಆರ್ ಅವರಿಗೆ ಕಳುಹಿಸಲಾಗಿದೆ. ಈಗಾಗಲೇ 350 ಅರ್ಜಿಗಳಿಗೆ ಆರ್‌ಟಿಸಿ ಆಗಿದೆ. 900 ಅರ್ಜಿಗಳನ್ನು ಪರಿಶೀಲನೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಕಳುಹಿಸಲಾಗಿದೆ. ಮುಂದಿನ ಡಿಸೆಂಬರ್ ಅಂತ್ಯದೊಳಗೆ ದುರಸ್ತಿಗೆ ಸಂಬಂಧಪಟ್ಟ ಬಹುತೇಕ ಅರ್ಜಿಗಳಿಗೆ ಆರ್‌ಟಿಸಿ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು.
ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಮೋಹಿತ್ ತಿಮ್ಮಯ್ಯ, ಜಿ.ಎಂ.ಹೂವಯ್ಯ, ಸಂದೀಪ್ ಕೂಗೂರು, ಸುದೀನ್, ಶ್ರೀನಿಧಿ, ವಸಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.