ADVERTISEMENT

ಬಿಜೆಪಿಗೆ ‘ಪ್ರತಿಷ್ಠೆ’, ಮೈತ್ರಿಗೆ ‘ಸವಾಲು’

ಕುಶಾಲನಗರದಲ್ಲಿ ‘ಮೈತ್ರಿ’ ಇಲ್ಲ, ಬಂಡಾಯ ಜೋರು, ಚಳಿಯಲ್ಲೂ ಚುನಾವಣೆ ‘ಕಾವು’

ಅದಿತ್ಯ ಕೆ.ಎ.
Published 24 ಅಕ್ಟೋಬರ್ 2018, 6:56 IST
Last Updated 24 ಅಕ್ಟೋಬರ್ 2018, 6:56 IST

ಮಡಿಕೇರಿ: ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವಾತಾವರಣ ಬದಲಾಗಿದೆ. ಸತತ ಮಳೆಯಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಸಣ್ಣಗೆ ಮೈಕೊರೆಯುವ ಚಳಿ ಆರಂಭಗೊಂಡಿದೆ. ಇಂತಹ ವಾತಾವರಣದ ನಡುವೆಯೂ ಸ್ಥಳೀಯ ಕದನದ ‘ಕಾವು’ ಏರುತ್ತಿದೆ.

ಕೊಡಗಿನ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಜ್ಜಾಗಿದೆ. ಸೋಮವಾರಪೇಟೆ, ವಿರಾಜಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿಯ ಎಲ್ಲ ವಾರ್ಡ್‌ಗಳಿಗೂ ಇದೇ 28ರಂದು ಚುನಾವಣೆ ನಡೆಯುತ್ತಿದ್ದು, ಬಿರುಸಿನ ‍ಪ್ರಚಾರಕ್ಕೆ ಮೂರು ಪಕ್ಷಗಳು ಇಳಿದಿವೆ. ಜಿಲ್ಲೆಯ ಮಟ್ಟಿಗೆ ಸ್ಥಳೀಯ ಕದನವು ಬಿಜೆಪಿಗೆ ‘ಪ್ರತಿಷ್ಠೆ’ಯಾದರೆ, ಸ್ಥಳೀಯವಾಗಿಯೂ ಎರಡು ಕಡೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌– ಕಾಂಗ್ರೆಸ್‌ಗೆ ಚುನಾವಣೆ ಸವಾಲಾಗಿದೆ.

ಮಡಿಕೇರಿ ಹಾಗೂ ವಿರಾಜಪೇಟೆಯ ಎರಡು ಕ್ಷೇತ್ರದಲ್ಲೂ ಬಿಜೆಪಿಯ ಶಾಸಕರಿದ್ದಾರೆ (ಎಂ.ಪಿ.ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ. ಬೋಪಯ್ಯ). ಗ್ರಾಮ ಪಂಚಾಯಿತಿ ಸದಸ್ಯರಿಂದ ವಿಧಾನ ಪರಿಷತ್‌ಗೆ ಬಿಜೆಪಿಯ ಸುನಿಲ್‌ ಸುಬ್ರಮಣಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಇದ್ದರೂ ಅವರು ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಅವರು ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾದವರು.

ADVERTISEMENT

ಜಿಲ್ಲಾ ಪಂಚಾಯಿತಿ ಆಡಳಿತವೂ ಬಿಜೆಪಿ ಕೈಯಲ್ಲಿದೆ. ಪ್ರಾಥಮಿಕ ಸಹಕಾರ ಸಂಘದ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಎಪಿಎಂಸಿ ಹಾಗೂ ತಾಲ್ಲೂಕು ಪಂಚಾಯಿತಿ ಆಡಳಿತದಲ್ಲೂ ಬಿಜೆಪಿಯದ್ದೇ ಹವಾ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡು ಕಡೆಯೂ ‘ಮೈತ್ರಿ’ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.

ಬಿಜೆಪಿಗೆ ಕಠಿಣ ಸವಾಲು: ಸೋಮವಾರಪೇಟೆಯಲ್ಲಿ ಒಟ್ಟು 11 ವಾರ್ಡ್‌ಗಳಿವೆ. ಕಳೆದ ಚನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್‌ 4, ಪಕ್ಷೇತರ ಅಭ್ಯರ್ಥಿ 1 ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದರು. ಬಿಜೆ‍ಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಎರಡು ಪಕ್ಷಗಳು ಪ್ರಯತ್ನ ನಡೆಸುತ್ತಿವೆ.

ಬಿಜೆಪಿ 11 ವಾರ್ಡ್‌ಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್‌ 6, ಜೆಡಿಎಸ್‌ 5 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಉತ್ತರ ಕೊಡಗಿನಲ್ಲಿ ಚುನಾವಣೆ ಕಾವೇರುವಂತೆ ಮಾಡಿವೆ. ಸ್ಥಳೀಯ ಕದನದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಕಾಂಗ್ರೆಸ್‌, ಜೆಡಿಎಸ್‌ನ ಚುನಾವಣೆ ಪೂರ್ವ ಮೈತ್ರಿಯಿಂದ ಬಿಜೆಪಿ ಹಾದಿಗೆ ಕಠಿಣ ಸವಾಲು ಎದುರಾಗಿದೆ.

ಹಿಗ್ಗಿದ ವಾರ್ಡ್‌ ಸಂಖ್ಯೆ: ದಕ್ಷಿಣ ಕೊಡಗಿನ ವಿರಾಜಪೇಟೆಯಲ್ಲೂ ಚುನಾವಣೆ ಪೂರ್ವ ‘ಮೈತ್ರಿ’ಯಿಂದ ಸ್ಥಳೀಯ ಸಂಸ್ಥೆಯ ಚುನಾವಣೆ ಕಣ ರಂಗು ಪಡೆದಿದೆ. ಸತತ ಪ್ರಾಬಲ್ಯ ತೋರಿರುವ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ‘ಮೈತ್ರಿ’ ಪಕ್ಷಗಳು ತಂತ್ರಗಾರಿಕೆ ಹೆಣೆದಿವೆ. ಕಳೆದ ಅವಧಿಯಲ್ಲಿ 16 ವಾರ್ಡ್‌ಗಳಿದ್ದವು. ಈಗ ವಾರ್ಡ್‌ ಸಂಖ್ಯೆ 18ಕ್ಕೆ ಹಿಗ್ಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 9, ಜೆಡಿಎಸ್ 4, ಕಾಂಗ್ರೆಸ್‌ 2, ಪಕ್ಷೇತರ ಅಭ್ಯರ್ಥಿ 1 ವಾರ್ಡ್‌ನಲ್ಲಿ ಗೆದ್ದಿದ್ದರು. ಬಿಜೆಪಿ ಅಧಿಕಾರ ಹಿಡಿದಿತ್ತು.

ಈ ಬಾರಿ ‘ಮೈತ್ರಿ’ ಏರ್ಪಟ್ಟಿದ್ದು ಕಮಲಕ್ಕೆ ಹಾದಿ ಕಠಿಣವಾಗಿದೆ. 18 ವಾರ್ಡ್‌ಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌, ಜೆಡಿಎಸ್ 5ನೇ ವಾರ್ಡ್‌ ಹೊರತು ‍ಪಡಿಸಿ ಉಳಿದೆಡೆ ಹೊಂದಾಣಿಕೆ ಮಾಡಿಕೊಂಡಿವೆ. ಬಿಜೆ‍ಪಿ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಅಧಿಕಾರ ಲಭಿಸಿದರೆ ವಿರಾಜಪೇಟೆ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಕದನವು ಕುತೂಹಲ ಮೂಡಿಸಿದೆ.

ಮೈತ್ರಿ ಇಲ್ಲ: ಕಳೆದ ಚುನಾವಣೆಯಲ್ಲಿ ಕುಶಾಲನಗರದಲ್ಲಿ 13 ವಾರ್ಡ್‌ಗಳಿದ್ದವು. ಬಿಜೆಪಿ 6, ಜೆಡಿಎಸ್‌ 3, ಕಾಂಗ್ರೆಸ್‌ 4 ವಾರ್ಡ್‌ಗಳಲ್ಲಿ ಗೆದ್ದಿದ್ದವು. ಈಗ ವಾರ್ಡ್‌ ಸಂಖ್ಯೆ 16ಕ್ಕೆ ಏರಿದೆ.

ಇಲ್ಲಿ ಚುನಾವಣೆ ಪೂರ್ವ ಮೈತ್ರಿ ಏರ್ಪಟ್ಟಿಲ್ಲ. ಮೂರೂ ಪಕ್ಷಗಳೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಮೂರು ಪಕ್ಷಗಳಲ್ಲಿ ಬಂಡಾಯ, ಕಾಲೆಳೆಯುವ ತಂತ್ರಗಾರಿಕೆ ಜೋರಾಗಿದೆ. ಪಕ್ಷೇತರ ಸದಸ್ಯರ ಅಬ್ಬರ ಜೋರಾಗಿದೆ. ಕುಶಾಲನಗರದಲ್ಲಿ 9 ವಾರ್ಡ್‌ಗಳಲ್ಲಿ ಗೆದ್ದ ಪಕ್ಷಕ್ಕೆ ಅಧಿಕಾರ ಸಿಗಲಿದೆ.

ವಿಚಿತ್ರವೆಂದರೆ ಕಳೆದ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದವು. ಕಾಂಗ್ರೆಸ್‌ಗೆ ಅಧಿಕಾರ ತಪ್ಪಲು ಕೆಲವರು ಕಾರಣವೆಂಬ ಆಪಾದನೆಗಳು ಕೇಳಿ ಬಂದಿದ್ದವು. ಒಳಜಗಳ ಹೈಕಮಾಂಡ್‌ ಅಂಗಳಕ್ಕೂ ತಲುಪಿತ್ತು.

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಸೋಮವಾರಪೇಟೆ ಹಾಗೂ ವಿರಾಜಪೇಟೆಯಲ್ಲಿ ಮೈತ್ರಿ ಅಬ್ಬರ ಜೋರಾಗಿದೆ. ಆದರೆ, ಕುಶಾಲನಗರದಲ್ಲಿ ಮಾತ್ರ ಭಿನ್ನ ಲೆಕ್ಕಾಚಾರ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ಕುಶಾಲನಗರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ನಡುವೆ ದೋಸ್ತಿ ಬದಲಿಗೆ ಕುಸ್ತಿ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.