ADVERTISEMENT

ಸುಂಟಿಕೊಪ್ಪ | ಲಾಕ್‌ಡೌನ್‌ನಿಂದ ಮಾಲೀಕರಿಗೆ ತಪ್ಪದ ಸಂಕಷ್ಟ

ಪೂರ್ಣ ಪ್ರಮಾಣದಲ್ಲಿ ತೆರೆಯದ ಹೋಟೆಲ್‌; ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖ

ಸುನಿಲ್ ಎಂ.ಎಸ್.
Published 22 ಮೇ 2020, 20:00 IST
Last Updated 22 ಮೇ 2020, 20:00 IST
ಸುಂಟಿಕೊಪ್ಪ ಬಸ್ ನಿಲ್ಧಾಣದಲ್ಲಿರುವ ಹೋಟೆಲೊಂದು ಕಳೆದ 2 ತಿಂಗಳಿನಿಂದ ಮುಚ್ಚಿದೆ
ಸುಂಟಿಕೊಪ್ಪ ಬಸ್ ನಿಲ್ಧಾಣದಲ್ಲಿರುವ ಹೋಟೆಲೊಂದು ಕಳೆದ 2 ತಿಂಗಳಿನಿಂದ ಮುಚ್ಚಿದೆ   

ಸುಂಟಿಕೊಪ್ಪ: ಕೋವಿಡ್-19ನಿಂದ ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಕಳೆದ 15 ದಿನಗಳಿಂದ ಎಲ್ಲ ಅಂಗಡಿಮುಂಗಟ್ಟು ತೆರೆದು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಈ ಅವಕಾಶ ಹೋಟೆಲ್‌ಗಳಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ.

ಹೋಟೆಲ್‌ನಲ್ಲಿ ಕುಳಿತು ತಿನ್ನಲು ಅವಕಾಶ ನೀಡದೇ ಕೇವಲ ಪಾರ್ಸಲ್ ವ್ಯವಸ್ಥೆಗೆ ಅವಕಾಶ ನೀಡಿದ್ದರಿಂದ ಸುಂಟಿಕೊಪ್ಪದ ಹಲವು
ಹೋಟೆಲ್‌ಗಳು ಈಗಲೂ ತೆರೆದಿಲ್ಲ. ಉಳಿದಂತೆ, ತೆರೆದಿರುವ ಸಣ್ಣಪುಟ್ಟ ಹೋಟೆಲ್ ಮತ್ತು ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.

ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಕೂಲಿಕಾರ್ಮಿಕರು, ಟಿಂಬರ್ ಕೆಲಸದವರು ಸೇರಿದಂತೆ ಇತರರು ಬೇಗನೇ ಕೆಲಸಕ್ಕೆ ತೆರಳುತ್ತಾರೆ. ಇಂತಹವರು, ಹೆಚ್ಚಾಗಿ ಹೋಟೆಲ್‌ಗಳನ್ನೇ ಅವಲಂಬಿಸಬೇಕಾಗುತ್ತದೆ. ಆದರೆ, ಹಲವು ಹೋಟೆಲ್‌ಗಳಲ್ಲಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದ ಕಾರಣ 2 ತಿಂಗಳಿನಿಂದಲೂ ಬಾಗಿಲು ತೆರೆಯುತ್ತಿಲ್ಲ.

ADVERTISEMENT

ಒಂದು ವೇಳೆ ಹೋಟೆಲ್‌ಗಳನ್ನು ತೆರೆದರೂ ಕಟ್ಟಡದ ಬಾಡಿಗೆ, ಕಾರ್ಮಿಕರ ಸಂಬಳ, ದಿನನಿತ್ಯದ ಖರ್ಚುಗಳನ್ನು ನೋಡಿದಾಗ ಬಹಳಷ್ಟು ಕಷ್ಟಕರವಾದ ಕೆಲಸ ಎಂದು ಮಾಲೀಕರು ಕಾದುನೋಡುತ್ತಿದ್ದಾರೆ. ಈ ತಿಂಗಳು ಪ್ರವಾಸಿಗರ ಭೇಟಿಯ ಸಂದರ್ಭವಾಗಿದ್ದರೂ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಯಾರೂ ಕೂಡ ಇತ್ತ ಬರುತ್ತಿಲ್ಲ. ಈಗಾಗಲೇ ಮಳೆಗಾಲ ಪ್ರಾರಂಭದ ಮುನ್ಸೂಚನೆ ಇದೆ. ಇನ್ನು ಹೋಟೆಲ್‌ಗಳನ್ನು ತೆರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ.ಇದರಿಂದಾಗಿ ಜೀವನ ಕಷ್ಟ ಎನ್ನುತ್ತಾರೆ ಹೋಟೆಲ್ ಮಾಲೀಕರು.

ಅದರಲ್ಲೂ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದವರೂ, ಹೆಚ್ಚಿನ ಮಂದಿ ಕೇರಳ, ಅಸ್ಸಾಂ, ಬಂಗಾಳ ಮೂಲದ ಯುವಕರು. ಆದರೆ ಅವರೆಲ್ಲರೂ ತಮ್ಮ ತಾಯ್ನಾಡಿಗೆ ತೆರಳಿದ್ದರಿಂದ ಇದೀಗ ಹೋಟೆಲ್ ತೆರೆದರೂ ಕೆಲಸಕ್ಕೆ ಜನರಿಲ್ಲದೆ ಸಮಸ್ಯೆ ಎದುರಿಸಬೇಕಾಗಿದೆ. ಒಟ್ಟಾರೆಯಾಗಿ ಕೊರೊನಾ ಸೋಂಕಿನಿಂದ ಹೋಟೆಲ್‌ಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಚೇತರಿಕೆ ಕಾಣದೆ ಮಾಲೀಕರು ಅತಂತ್ರರಾಗಿದ್ದಾರೆ. ಅಲ್ಲದೇ ಗ್ರಾಹಕರಿಗೆ ಮಧ್ಯಾಹ್ನದ ಊಟ ಸಿಗದೇ ನಿರಾಸೆಯಾಗಿ ಸರ್ಕಾರವನ್ನು ಟೀಕಿಸುತ್ತಿರುವುದು ಕೂಡ ಕಂಡುಬಂದಿದೆ.

**
ಬಹಳ ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದೇವೆ. ಇದೇ ಮೊದಲ ಬಾರಿಗೆ ಕೊರೊನಾ ಸೊಂಕಿನ ಆಘಾತ ಸಂಭವಿಸಿದೆ. ಸರ್ಕಾರ ಕುಳಿತು ತಿನ್ನುವುದಕ್ಕೆ ಅವಕಾಶ ನೀಡದೆ, ಪಾರ್ಸಲ್ ನೀಡುವಂತೆ ಆದೇಶ ನೀಡಿದೆ. ಈ ಕಾರಣದಿಂದ, ಗ್ರಾಹಕರು ಬರುವುದಿಲ್ಲ. ಅಂತರ ಕಾಯ್ದುಕೊಂಡು ಕುಳಿತು ತಿನ್ನುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಲಿ.
–ಜಯಂತ್,ಗಣೇಶ ಕ್ಯಾಂಟೀನ್, ಸುಂಟಿಕೊಪ್ಪ

**
ಹೋಟೆಲ್‌ಗಳಲ್ಲಿ ಊಟವನ್ನು ಕುಳಿತು ತಿನ್ನಲು ಬಯಸುತ್ತಾರೆ. ಯಾರೂ ಪಾರ್ಸಲ್ ತೆಗೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಹೋಟೆಲ್ ತೆರೆಯುವುದರಿಂದ ಬಹಳಷ್ಟು ನಷ್ಟ ಸಂಭವಿಸಲಿದೆ. ಬಾಡಿಗೆ, ಸಂಬಳ ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಕುಳಿತು ತಿನ್ನುವುದಕ್ಕೆ ಅವಕಾಶ ನೀಡಿದರೆ ಹೋಟೆಲ್ ತೆರೆಯಲು ಸಾದ್ಯವಾಗಲಿದೆ.
–ಮೋಹನ್,ಮಾಲೀಕರು, ಹೋಟೆಲ್ ದುರ್ಗಾ, ಸುಂಟಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.