ADVERTISEMENT

ಮಡಿಕೇರಿ: ಮತಗಟ್ಟೆಗಳಿಗೆ ಅರಣ್ಯ ಇಲಾಖೆಯಿಂದಲೂ ಭದ್ರತೆ!

ಸಾಂಭವ್ಯ ವ‌ನ್ಯಜೀವಿಗಳ ದಾಳಿ ನಡೆಯಲು ಸಿಬ್ಬಂದಿ ನಿಯೋಜನೆ

ಕೆ.ಎಸ್.ಗಿರೀಶ್
Published 26 ಏಪ್ರಿಲ್ 2024, 4:13 IST
Last Updated 26 ಏಪ್ರಿಲ್ 2024, 4:13 IST
   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರು ಬೇಸಿಗೆ ವ್ಯಾಪಿಸಿದ್ದು, ಮಳೆ ಸಮರ್ಪಕವಾಗಿ ಸುರಿಯದೇ ವನ್ಯಜೀವಿಗಳು ಕಡುಕಷ್ಟ ಅನುಭವಿಸುತ್ತಿವೆ. ನೀರಿಗಾಗಿ ಹಾಗೂ ಆಹಾರಕ್ಕಾಗಿ ಆನೆ, ಹುಲಿಗಳು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ.

ಇದರಿಂದ ಇತ್ತೀಚಿನ ದಿನಗಳಲ್ಲಿ ವನ್ಯಜೀವಿ – ಮಾನವ ಸಂಘರ್ಷ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ಗಮನಿಸಿರುವ ಅರಣ್ಯ ಇಲಾಖೆ ವನ್ಯಜೀವಿಗಳ ಉಪಟಳ ಹೆಚ್ಚಿರುವ ಮತಗಟ್ಟೆಗಳ ಕಡೆ ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ. ಜೊತೆಗೆ, ಎಲ್ಲ ಬಗೆಯ ಪರಿಸ್ಥಿತಿ ನಿಭಾಯಿಸಿಲು ತುರ್ತು ಸ್ಪಂದನಾ ತಂಡಗಳೂ ಸೇರಿದಂತೆ ಎಲ್ಲ ಸಿಬ್ಬಂದಿಗೂ ಸೂಚಿಸಲಾಗಿದೆ. ಈ ಮೂಲಕ ಜನರು ನಿರ್ಭೀತಿಯಿಂದ ಮತ ಚಲಾಯಿಸಲು ಅನುವು ಮಾಡಿಕೊಟ್ಟಿದೆ.

ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ 23 ಸಿಬ್ಬಂದಿಯನ್ನು ವಿವಿಧ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ವಿರಾಜಪೇಟೆಯಲ್ಲಿ 5, ಮಾಕುಟ್ಟ 4, ಪೊನ್ನಂಪೇಟೆ 6, ತಿತಿಮತಿ ಇಬ್ಬರು, ಮುಂಡ್ರೋಟ್‌ಗೆ 6 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ADVERTISEMENT

ಇದರೊಂದಿಗೆ ಆಯಾ ವಲಯ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಟೆ ತಡೆಗಟ್ಟುವ ಸಿಬ್ಬಂದಿ, ಆನೆ ಓಡಿಸುವ ತಂಡದ ನೌಕರರು, ಕ್ಷಿಪ್ರ ಸ್ಪಂದನಾ ತಂಡದ ನೌಕರರನ್ನೂ ನಿಯೋಜಿಸಲಾಗಿದೆ.

ಮಡಿಕೇರಿ ವಿಭಾಗದ ಕುಶಾಲನಗರದ ಚಿಕ್ಕತ್ತೂರು, ನಂಜರಾಯಪಟ್ಟಣ, ತ್ಯಾಗತ್ತೂರು, ನೆಲ್ಲಿಹುದಿಕೇರಿ, ದುಬಾರೆ, ಮಾಲ್ದಾರೆ, ಕಂಬಿಬಾಣೆ, ಅತ್ತೂರು– ನಲ್ಲೂರು, ಮೋದುರು ವ್ಯಾಪ್ತಿಯಲ್ಲಿ 7 ಆರ್‌ಆರ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ.

ಮಡಿಕೇರಿಯ ಅರೆಕಾಡು, ಕಟ್ಟೆಮಾಡು, ಗಾಳಿಬೀಡು ವ್ಯಾಪ‍್ತಿಯಲ್ಲಿ 2 ಆರ್‌ಆರ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ ಯಡವನಾಡು, ಸಜ್ಜಳ್ಳಿ, ಬೇಳೂರು, ಬಾಣಾವಾರ, ಭುವಂಗಾಲ, ಅರಿಶಿನಗುಪ್ಪೆ, ಸೀಗೆಹೊಸೂರು, ಕಾಜೂರು, ಯಡವಾರೆ ವ್ಯಾಪ್ತಿಯಲ್ಲಿ 3 ಆರ್‌ಆರ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ.

ಶನಿವಾರಸಂತೆಯಲ್ಲಿ ಕಟ್ಟೆಪುರ, ನಿಲುವಾಗಿಲು, ಶಿರವಾಗಿಲುವಿನಲ್ಲಿ 4 ಆರ್‌ಆರ್‌ಟಿ ತಂಡಗಳು, ಭಾಗಮಂಡಲದ ನಾಲಾಡಿ, ನೆಲಡಿ, ಕುಂಜಿಲದಲ್ಲಿ 3 ಆರ್‌ಆರ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.