ADVERTISEMENT

ಮಡಿಕೇರಿಗೆ ಬಂದು ಪರದಾಡಿದ ಕಡವೆ

ಕೊನೆಗೂ ದುಬಾರೆ ಅರಣ್ಯ ಪ್ರದೇಶ ಸೇರಿದ ಕಡವೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:52 IST
Last Updated 12 ಫೆಬ್ರುವರಿ 2020, 13:52 IST
ಗಾಯಗೊಂಡಿದ್ದ ಕಡವೆ
ಗಾಯಗೊಂಡಿದ್ದ ಕಡವೆ   

‌ಮಡಿಕೇರಿ: ಆಹಾರ ಅರಸಿ ಕಾಡಿನಿಂದ ‘ಮಂಜಿನ ನಗರಿ’ ಮಡಿಕೇರಿಗೆ ಬಂದಿದ್ದ ಕಡವೆ ಅವಾಂತರವನ್ನೇ ಸೃಷ್ಟಿಸಿ ಕೊನೆಗೆ ಸುರಕ್ಷಿತವಾಗಿ ದುಬಾರೆ ಅರಣ್ಯ ಪ್ರದೇಶ ಸೇರಿದೆ.

ಮಂಗಳವಾರ ಮಧ್ಯರಾತ್ರಿ ದಾರಿತಪ್ಪಿ ನಗರಕ್ಕೆ ಬಂದಿದ್ದ ಕಡವೆ ಜನರ ನಿದ್ದೆಗೆಡಿಸಿತ್ತು. ಆರಂಭದಲ್ಲಿ ಕಾಡಾನೆಯೆಂದು ಜನರು ಭಾವಿಸಿದ್ದರು. ಗಾಬರಿಗೊಂಡು ಅಲ್ಲಲ್ಲಿ ಓಡಾಡಿದ ಕಡವೆ, ತಡೆಗೋಡೆ ಕೆಡವಿ ಹಾಕಿದೆ. ಮನೆಯೊಂದರ ಚಾವಣಿಗೂ ಹಾನಿ ಮಾಡಿದೆ.

ಜಿಲ್ಲಾ ಕ್ರೀಡಾಂಗಣದ ಮೇಲ್ಭಾಗದಲ್ಲಿರುವ ಚಿಮ್ಮಿ ದೇವಯ್ಯ ಅವರ ಮನೆಯ ಕಾಂಪೌಂಡ್ ಹಾರಿ ಬಂದ ಕಡವೆ ಮನೆ ಮುಂದೆ ಬಂದು ನಿಂತಿತ್ತು. ಆಗ ಮನೆಯವರೂ ಗಾಬರಿಗೊಂಡಿದ್ದರು. ಗಾಯಗೊಂಡಿದ್ದ ಕಡವೆಯನ್ನು ಕಂಡ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಿಮ್ಮಿ ದೇವಯ್ಯ ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದರು.

ADVERTISEMENT

ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ ಕಡವೆಯನ್ನು ರಾತ್ರಿಯೇ ಅರಣ್ಯ ಇಲಾಖೆ ಅತಿಥಿ ಗೃಹದ ಆವರಣಕ್ಕೆ ಕೊಂಡೊಯ್ದು ಕಟ್ಟಿ ಹಾಕಿದ್ದರು. ರಾತ್ರಿ ಕಡವೆ ಕೊಂಡೊಯ್ಯುಲು ಸಿಬ್ಬಂದಿಯೂ ಪರದಾಟ ನಡೆಸಿದ್ದರು.

ರಾತ್ರಿ ದಾರಿ ಕಾಣದೆ ತಂತಿ ಬೇಲಿಗೆ ಸಿಲುಕಿದ್ದರ ಪರಿಣಾಮಕಡವೆಯ ಕಣ್ಣು ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿತ್ತು. ಬುಧವಾರ ಬೆಳಿಗ್ಗೆ ವೈದ್ಯರು ಚಿಕಿತ್ಸೆ ನೀಡಿದ ಮೇಲೆ ದುಬಾರೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.