ಮಡಿಕೇರಿ: ಮಡಿಕೇರಿ ದಸರೆಯ ಪ್ರಧಾನ ಆಕರ್ಷಣೆಯಲ್ಲಿ ಒಂದಾದ ಕಾಫಿ ದಸರೆಗೆ ಇನ್ನು ಐದೇ ದಿನ. ಸೆ. 24ರಂದು ಬೆಳಿಗ್ಗೆ 10 ಗಂಟೆಗೆ ಕಾಫಿ ದಸರೆ ಉದ್ಘಾಟನೆಯಾಗಲಿದೆ.
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುವ ಕಾಫಿ ದಸರೆಯು ಇಲ್ಲಿನ ಗಾಂಧಿ ಮೈದಾನದಲ್ಲಿ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ಕೊಡಗಿನ ದಿವಂಗತ ಸಾಕಮ್ಮ ಸ್ಮರಣಾರ್ಥ ಸಭಾಂಗಣದಲ್ಲಿ ನಡೆಯಲಿದೆ.
ಒಟ್ಟು 35 ಮಳಿಗೆಗಳು ಕಾಫಿ ಸಂಬಂಧಿತ ಮಾಹಿತಿಯನ್ನು ನೀಡಲಿವೆ. ಕೊಡಗಿನ ಅನೇಕ ಕಾಫಿ ಕೆಫೆಗಳಲ್ಲಿ ಸ್ವಾದಿಷ್ಟ ಕಾಫಿ ಸವಿಯನ್ನೂ ಸವಿಯುವ ಅವಕಾಶ ಇದೆ. ಭಾರತೀಯ ಕಾಫಿ ಮಂಡಳಿ, ಕೃಷಿ ಇಲಾಖೆ, ಪಶುವೈದ್ಯಕೀಯ ಇಲಾಖೆ, ತೋಟಗಾರಿಕಾ ಇಲಾಖೆ, ಕೈಗಾರಿಕಾ ಇಲಾಖೆ, ಹಾಪ್ ಕಾಮ್ಸ್, ನಂದಿನಿ ಹಾಲಿನ ಉತ್ಪನ್ನಗಳು, ಮೀನುಗಾರಿಕಾ ಇಲಾಖೆ,, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಸೇರಿದಂತೆ ಕಾಫಿ ಸಂಬಂಧಿತ ಅನೇಕ ಸಂಘಸಂಸ್ಥೆಗಳು, ಕಾಫಿ ಕೆಫೆಗಳು ಈ ವರ್ಷದ ಕಾಫಿ ದಸರಾದಲ್ಲಿ ಮಾಹಿತಿ ನೀಡಲಿವೆ.
ಕಾಫಿ ದಸರಾ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆ ಆಯೋಜಿಸಲಾಗಿದೆ. ಕಾಫಿ ಫ್ಲೆವರ್ ಕೇಕ್, ವಿಭಾಗ, ಕಾಫಿ ಫ್ಲೆವರ್ ಕಪ್ ಕೇಕ್ ವಿಭಾಗ, ಕಾಫಿ ಫ್ಲೆವರ್ ಬ್ರೌನಿ ವಿಭಾಗ, ಕಾಫಿ ಫ್ಲೆವರ್ ಬಿಸ್ಕತ್ ವಿಭಾಗ, ಕಾಫಿ ಫ್ಲೆವರ್ ಪುಡ್ಡಿಂಗ್ ವಿಭಾಗ, ವಿಭಿನ್ನ ರುಚಿಯಿರುವ ಕಾಫಿ ಪಾನೀಯ ವಿಭಾಗ, ಕಾಫಿ ಫ್ಲೇವರ್ ಚಾಕಲೇಟ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಭಾರತೀಯ ಕಾಫಿ ಮಂಡಳಿಯ ಗುಣಮಟ್ಟ ವಿಭಾಗದ ನಿರ್ದೇಶಕ ಡಾ.ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲಿದ್ದಾರೆ. ಸಕಲೇಶಪುರದ ಪ್ರಗತಿಪರ ಕೃಷಿಕ ಕರಣ್ ಅವರು ಕಾಫಿ ಕೃಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕುಶಾಲನಗರದ ಪ್ರಗತಿ ಪರ ಕೃಷಿಕ ಜೆರ್ಮಿ ಡಿಸೋಜಾ ಅವರು ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ ಮಾಹಿತಿ ನೀಡಿದರೆ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಕಾಫಿ ಬೆಳೆಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಇದಕ್ಕೂ ಮುನ್ನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಕಾಫಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ವೇದಿಕೆಯ ಕಾರ್ಯಕ್ರಮಗಳನ್ನು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೖಂದ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ.ಮಂತರ್‌ಗೌಡ ವಹಿಸಲಿದ್ದಾರೆ. ಮುಖ್ಮಮಂತ್ರಿಯ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯ ಅಜಯ್ ಮಾಕನ್, ವಿಧಾನಪರಿಷತ್ ಸದಸ್ಯರಾದ ಎಂ.ಪಿ. ಸುಜಾಕುಶಾಲಪ್ಪ, ಬೋಜೇಗೌಡ, ಡಾ.ಧನಂಜಯ್ ಸರ್ಜಿ, ಜಿಲ್ಲಾಧಿಕಾರಿ ವೆಂಕಟರಾಜಾ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅದ್ಯಕ್ಷ ಬಿ.ವೈ.ರಾಜೇಶ್ , ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ಮಹಿಳಾ ಕಾಫಿ ಜಾಗೖತಿ ಸಂಘದ ಅಧ್ಯಕ್ಷೆ ಜ್ಯುತಿಕಾ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ ಎಂದು ಕಾಫಿ ದಸರಾ ಸಂಚಾಲಕ ಎಚ್.ಟಿ.ಅನಿಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.