ADVERTISEMENT

ಮಡಿಕೇರಿ: ‘ಬೆಳಕಿನ ದಸರೆ’ಯನ್ನು ಬೆಳಗಲಿವೆ 13 ಭಾಷೆಯ ಕವನಗಳು!

ಬಹುಭಾಷೆಗಳ ಜಿಲ್ಲೆ ಕೊಡಗಿನಲ್ಲಿ ಎಲ್ಲ ಭಾಷೆಗಳಿಗೂ ಆದ್ಯತೆ

ಕೆ.ಎಸ್.ಗಿರೀಶ್
Published 18 ಸೆಪ್ಟೆಂಬರ್ 2025, 20:37 IST
Last Updated 18 ಸೆಪ್ಟೆಂಬರ್ 2025, 20:37 IST
ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯ ಲೊಗೊ
ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಯ ಲೊಗೊ   

ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಯಲ್ಲಿ ಈ ಬಾರಿ ಬಹುಭಾಷಾ ಕವಿಗೋಷ್ಠಿಯಲ್ಲಿ ಒಟ್ಟು 13 ಭಾಷೆಯ ಕವಿಗಳು ಭಾಗಿಯಾಗುತ್ತಿದ್ದು, ವೈವಿಧ್ಯಮಯವಾದ ರಸಾನುಭೂತಿ ಸಹೃದಯರಿಗೆ ಸಿಗಲಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಮಲೆಯಾಳಂ, ಯರವ, ಜೇನುಕುರುಬ, ಕೊಡವ, ಕುಂಬಾರ, ಹವ್ಯಕ, ಬ್ಯಾರಿ, ಬೈರ, ಅರೆಭಾಷೆಯಲ್ಲಿ ಕವನ ವಾಚನ ಸೆ. 25ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಕೊಡಗು ಮಾತ್ರವಲ್ಲದೇ, ಕಾಸರಗೋಡು, ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಿಂದ 77ಕ್ಕೂ ಅಧಿಕ ಸಂಖ್ಯೆಯಲ್ಲಿ ಕವಿಗಳು, ಕವಯತ್ರಿಯರು ಇಲ್ಲಿ ತಮ್ಮ ತಮ್ಮ ಭಾಷೆಯಲ್ಲಿ ಕವನ ವಾಚಿಸಲಿದ್ದಾರೆ. ಇವರೆಲ್ಲರ ಕವನಗಳನ್ನೂ ಒಳಗೊಂಡ ಕವನ ಸಂಕಲನವೂ ಅಂದೇ ಬಿಡುಗಡೆಯಾಗಲಿದೆ.

ADVERTISEMENT

ಇದಲ್ಲದೇ 6ರಿಂದ 14 ವರ್ಷದ ಒಳಗಿನ ಮಕ್ಕಳಿಗಾಗಿಯೇ ‍ಕವಿಗೋಷ್ಠಿ ಇರಲಿದೆ. ಚುಟುಕಗಳ ವಾಚನಕ್ಕೂ ಅವಕಾಶ ಮಾಡಿಕೊಡಲಾಗಿದೆ. ತೃತೀಯ ಲಿಂಗಿಯೊಬ್ಬರೂ ಕವನ ವಾಚನ ಮಾಡುವುದು ವಿಶೇಷ.

ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಸಣ್ಣಪ್ರಮಾಣದಲ್ಲಿ ಪ್ರಯಾಣವೆಚ್ಚವನ್ನೂ ನೀಡಲಾಗುತ್ತದೆ. ಬೆಳಿಗ್ಗೆ ಆರಂಭವಾಗುವ ಕವಿಗೋಷ್ಠಿ ಸಂಜೆಯವರೆಗೂ ನಡೆಯಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್, ‘ಈ ವರ್ಷ ಒಟ್ಟು 207ಕ್ಕೂ ಅಧಿಕ ಕವನಗಳು ಬಂದಿದ್ದವು. ಅವುಗಳಲ್ಲಿ ಸುಮಾರು 77 ಕವನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೆಜಿಎಫ್‌ ಸಿನಿಮಾಕ್ಕೆ ಹಾಡು ಬರೆದ ಚಿತ್ರಸಾಹಿತಿ ಕೊಪ್ಪಳದ ಕಿನ್ನಾಳ ರಾಜ್ ಅವರೂ ಸಹ ಕವಿಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.