ADVERTISEMENT

ಮಡಿಕೇರಿ ದಸರಾ | ಗಾಂಧಿ ಮೈದಾನದಲ್ಲಿ ಗಾನ, ನೃತ್ಯದ ಅಲೆ

ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗಾನನಮನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:50 IST
Last Updated 26 ಸೆಪ್ಟೆಂಬರ್ 2025, 4:50 IST
<div class="paragraphs"><p>ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂರ್ಗ್ ಸನ್‌ರೈಸರ್ ಮೆಲೊಡೀಸ್ ತಂಡದವರು ಹಾಡುಗಳನ್ನು ಹಾಡಿದರು&nbsp;</p></div>

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂರ್ಗ್ ಸನ್‌ರೈಸರ್ ಮೆಲೊಡೀಸ್ ತಂಡದವರು ಹಾಡುಗಳನ್ನು ಹಾಡಿದರು 

   

ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುವಾರ ಹಿರಿಯ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗಾನ ನಮನ ಸಲ್ಲಿಸಲಾಯಿತು.

ADVERTISEMENT

ಕೂರ್ಗ್ ಸನ್‌ರೈಸ್ ಮೆಲೋಡೀಸ್ ತಂಡದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಪುಷ್ಪನಮನ ಸಲ್ಲಿಸಿ, ಹಾಡುಗಳನ್ನು ಹಾಡುವ ಮೂಲಕ ವಿಶಿಷ್ಟವಾಗಿ ನೆನೆಯಲಾಯಿತು.

ತಂಡದ ರವಿ ಅವರು ‘ಕನ್ನಡ ನಾಡಿನ ಜೀವನದಿ ಕಾವೇರಿ’ ಹಾಡುವ ಮೂಲಕ ಪ್ರೇಕ್ಷಕರು ಸಾಲುಸಾಲಾಗಿ ಸಭಾಂಗಣಕ್ಕೆ ಬರುವಂತೆ ಮಾಡಿದರು. ನಂತರ ಅವರ ಜೊತೆಯಾದ ಚೋಂದಮ್ಮ ‘ಎರಡು ಕನಸು’ ಚಿತ್ರದ ಹಾಡಿನ ಮೂಲಕ ಗಾನಸುಧೆಯನ್ನೇ ಹರಿಸಿದರು.

ಡಮರುಗ ಹಿಡಿದು ವಿಶಿಷ್ಟವಾಗಿ ಕುಣಿಯುತ್ತ ಬಂದ ಬಾಲಕರ ಬಾಲಮಂದಿರದ ಮಕ್ಕಳು ಶಿವನ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಚಕಿತಗೊಳಿಸಿದರು.

ನಂತರ, ನಾಪೋಕ್ಲುವಿನ ಓಂಕಾರ್ ತಂಡದವರು ರಸಮಂಜರಿಯನ್ನು ಪ್ರಸ್ತುತಪಡಿಸಿ ಹಲವು ಹಾಡಿನ ಮೂಲಕ ಪ್ರೇಕ್ಷಕರ ಮನ ತಣಿಸಿದರು.

ನಂತರ, ವೇದಿಕೆ ಏರಿದ ಟೀಂ 7 ತಂಡದವರು ಹೊಸ ತಲೆಮಾರಿನ ಹಾಡುಗಳಿಗೆ ಆದ್ಯತೆ ನೀಡಿದರು. ಹಲವು ಹೊಸ ಹೊಸ ಹಾಡಿನ ತುಣುಕುಗಳಿಗೆ ತಾವು ನೃತ್ಯ ಮಾಡಿದ್ದು ಮಾತ್ರವಲ್ಲ ಯುವಕ, ಯುವತಿಯರು ಎದ್ದು ಕುಣಿಯುವಂತೆ ಮಾಡುವಲ್ಲಿ ಸಫಲರಾದರು.

ವಿರಾಜಪೇಟೆಯ ನಾಟ್ಯಮಯೂರಿ, ಮಂಗಳೂರಿನ ಹೆಜ್ಜೆನಾದ ಹಾಗೂ ಸುಗಿಪು ಜನಪದ ಬಂಗ್ಲೆಗುಡ್ಡ ತಂಡದವರು ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಕುರ್ಚಿಯ‌ಲ್ಲೇ ಕಟ್ಟಿ ಹಾಕಿದರು.

ಮಡಿಕೇರಿಯ ಗಾಂಧಿ  ಮೈದಾನದಲ್ಲಿ ಗುರುವಾರ ರಾತ್ರಿ ಬಾಲಕರ ಬಾಲಮಂದಿರದ ಮಕ್ಕಳು ನೃತ್ಯ ಪ‍್ರದರ್ಶಿಸಿ ಗಮನ ಸೆಳೆದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಎಲ್ಲರೂ ಒಂದಾಗಿ ಹಬ್ಬ ಆಚರಿಸಿ; ಐಶ್ವರ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ‘ಎಲ್ಲರೂ ಒಂದಾಗಿ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದಾಗ ಮಾತ್ರ ಹಬ್ಬ ಸಾರ್ಥಕವಾಗುತ್ತದೆ’ ಎಂದರು. ಬಿ.ಕೆ.ಜಗದೀಶ್ ಮಾತನಾಡಿ ‘ಮೈಸೂರು ದಸರಾ ಬಿಟ್ಟರೆ ಮಡಿಕೇರಿಯ ದಸರೆಯೇ ಮಹತ್ವದ್ದು. ಮಂಟಪಗಳ ಶೋಭಾಯಾತ್ರೆ ಪ್ರಮುಖ ಆಕರ್ಷಣೆ. ಈಗ ವರುಣನ ಭೀತಿ ಇದೆ. ಮಳೆಯಿಂದ ಮಂಟಪ ತಯಾರಿ ತುಂಬಾ ಕಷ್ಟವಾಗುತ್ತಿದೆ. ಮಂಟಪದಲ್ಲಿ ಯಾವುದೇ ಕೆಲಸವೂ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕಾಳಪ್ಪ ಮಾತಾಡಿ ‘ಮಳೆ ಕಡಿಮೆಯಾಗಿ ದಸರಾ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಿ ನಡೆಯಲಿ’ ಎಂದು ಆಶಿಸಿದರು.

‘ಬ್ರಾಂಡ್ ಆಗಿಲ್ಲ ಮಡಿಕೇರಿ ದಸರೆ’

ಮಡಿಕೇರಿ ದಸರಾವನ್ನು ಬ್ರಾಂಡ್ ಮಾಡುವಲ್ಲಿ ಎಲ್ಲರೂ ಸೋತಿದ್ದೇವೆ ಎಂದು ಕಾಫಿ ದಸರಾ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಬೇಸರ ವ್ಯಕ್ತಪಡಿಸಿದರು. ಮಡಿಕೇರಿ ದಸರೆಯ ತಯಾರಿಯ ಅವಧಿಯೂ ಕಡಿಮೆ. ಬೇರೆಲ್ಲ ಊರಿನ ದಸರೆಗೆ ಸರ್ಕಾರ ಉದಾರವಾಗಿ ಹಣ ಕೊಡುತ್ತದೆ. ಆದರೆ ಮಡಿಕೇರಿ ದಸರೆಗೆ ಕಾಡಿ ಬೇಡಿ ₹ 1.5 ಕೋಟಿ ತರಬೇಕಿದೆ. ಇನ್ನಾದರೂ ನಾವು ಮಡಿಕೇರಿ ದಸರೆಯನ್ನು ಒಂದು ಬ್ರಾಂಡ್ ಮಾಡಬೇಕು. ಈ ಕುರಿತು ಎಲ್ಲರೂ ಗಂಭೀರ ಗಮನ ಹರಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.