ADVERTISEMENT

ಮಡಿಕೇರಿ ದಸರೆ: ‘ಗೀತೋಪದೇಶ’ವೇ ಆರಂಭ ಬಿಂದು

ದೇಚೂರಿನಲ್ಲಿ ನಡೆಯಲಿದೆ ‘ರಾಮಾಂಜನೇಯ ವೈಭವ’

ಕೆ.ಎಸ್.ಗಿರೀಶ್
Published 27 ಸೆಪ್ಟೆಂಬರ್ 2025, 3:11 IST
Last Updated 27 ಸೆಪ್ಟೆಂಬರ್ 2025, 3:11 IST
ಮಡಿಕೇರಿಯಲ್ಲಿ ಕಳೆದ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ‘ವಿಷ್ಣುವಿನ ಮತ್ಸ್ಯಾವತಾರ’ ಕಥಾವಸ್ತುವನ್ನು ಹೊತ್ತ ಪೇಟೆ ಶ್ರೀರಾಮಮಂದಿರದ ಮಂಟಪವು ಮುಂಚೂಣಿಯಲ್ಲಿತ್ತು. ಲಕ್ಷಾಂತರ ಮಂದಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು   ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಕಳೆದ ನಡೆದ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ‘ವಿಷ್ಣುವಿನ ಮತ್ಸ್ಯಾವತಾರ’ ಕಥಾವಸ್ತುವನ್ನು ಹೊತ್ತ ಪೇಟೆ ಶ್ರೀರಾಮಮಂದಿರದ ಮಂಟಪವು ಮುಂಚೂಣಿಯಲ್ಲಿತ್ತು. ಲಕ್ಷಾಂತರ ಮಂದಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು   ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ನಾಡಿನಲ್ಲೇ ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯ ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವುದು ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮಮಂದಿರದ ಮಂಟಪ.

ಇಂದಿಗೂ ಈ ದೇಗುಲದ ಮಂಟಪವನ್ನು ಬಹುತೇಕ ಎಲ್ಲ ಹಿರಿಯರೂ ಮೆಚ್ಚಿಕೊಳ್ಳುತ್ತಾರೆ. ಶೋಭಾಯಾತ್ರೆಯ ದಿನ ಮಂಟಪದಲ್ಲಿ ಸಾಗುವ ದೇವರ ಕಲಾಕೃತಿಗೆ ಹಿರಿಯರು ಭಕ್ತಿಭಾವದಿಂದ ನಮಿಸುತ್ತಾರೆ.

ಮಂಟಪ ಕಲೆ ಹಾಗೂ ಸಂಸ್ಕೃತಿ ಉಳಿಸುವಿಕೆಯಲ್ಲಿ ಮುಂಚೂಣಿಯಲ್ಲಿರುವ ಪೇಟೆ ಶ್ರೀರಾಮ ಮಂದಿರದ ಮಂಟಪವು ಶೋಭಾಯಾತ್ರೆಯಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ಮಂಟಪ ರಚನೆಯಾಗುತ್ತಿದೆ.

ADVERTISEMENT

ಇದರಲ್ಲಿ ಕೃಷ್ಣ, ಅರ್ಜುನ, ಋಷಿಮುನಿಗಳು ಸೇರಿದಂತೆ 7ರಿಂದ 8 ಕಲಾಕೃತಿಗಳು ಇರುತ್ತವೆ. ಸದ್ಯ, 2 ಟ್ರಾಕ್ಟರ್‌ನ್ನು ಬಳಕೆ ಮಾಡಲಾಗುತ್ತಿದೆ. ಕಲಾಕೃತಿಗಳು ಬೆಂಗಳೂರಿನಲ್ಲಿ ತಯಾರಾಗುತ್ತಿವೆ.

ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪೇಟೆ ಶ್ರೀರಾಮಮಂದಿರ ಮಂಟಪ ಸಮಿತಿ ಅಧ್ಯಕ್ಷ ಶಿವಮೂರ್ತಿ, ‘ಪೇಟೆ ಶ್ರೀರಾಮಮಂದಿರಕ್ಕೆ ಸುಮಾರು 160 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

ಈ ಹಿಂದಿನ ವರ್ಷಗಳಲ್ಲಿ ಪ್ರದರ್ಶಿಸಲಾಗಿದ್ದ ‘ಶಿವದರ್ಶನ’, ‘ವೈಕುಂಠ ದರ್ಶನ’ ಹಾಗೂ ವಿಷ್ಣುವಿನ ಮತ್ಸ್ಯಾವತಾರ’ ಮಂಟಪವು ಜನಮನಸೂರೆಗೊಳ್ಳುವಲ್ಲಿ ಸಫಲವಾಗಿತ್ತು.

107ನೇ ವರ್ಷಕ್ಕೆ ಅಡಿ ಇಟ್ಟ

ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿ ಹೊರಡುವ ದೇಚೂರು ಶ್ರೀರಾಮಮಂದಿರವು ಈಗಾಗಲೇ 106 ವಸಂತಗಳನ್ನು ಪೂರೈಸಿ 107ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ದೇಗುಲದ ಸಮೀಪ ಭಜನಾ ಮಂದಿರದ ಪುನರ್‌ನಿರ್ಮಾಣ  ಮಾಡುತ್ತಿರುವುದರಿಂದ ಅತಿಯಾದ ಆಡಂಬರ ಈ ಬಾರಿ ಇಲ್ಲ. ಆದರೂ, ಉತ್ತಮ ಕಲಾತ್ಮಕತೆಯಿಂದ ಕೂಡಿರುತ್ತದೆ. ಒಂದೇ ಟ್ರಾಕ್ಟರ್‌ನಲ್ಲಿ ಇಡೀ ಕಥೆಯನ್ನು ಹೇಳಲು ಸಿದ್ಧತೆ ನಡೆಸಲಾಗಿದೆ.

ಮೈಸೂರು ಸಮೀಪದ ಉದ್ಭೂರಿನಲ್ಲಿ 4 ಕಲಾಕೃತಿಗಳು ನಿರ್ಮಾಣವಾಗುತ್ತಿವೆ. ದಿಂಡಿಗಲ್ಲಿನ ಬೋರ್ಡ್‌ ಇದೆ ಎಂದು ಮಂಟಪ ಸಮಿತಿ ಅಧ್ಯಕ್ಷ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ಪ್ರದರ್ಶಿಸಿದ್ದ ‘ಮಧುಕೈಟಭರ ವಧಾ ಪ್ರಸಂಗ’ ಹಾಗೂ ಕಾಳಿಂಗ ಮರ್ಧನ’ವು ನೋಡುಗರಿಗೆ ರಸದೌತಣವನ್ನೇ ಬಡಿಸಿದ್ದವು.

ದೇಚೂರು ಶ್ರೀರಾಮಮಂದಿರವು ಕಳೆದ ವರ್ಷ ‘ಕಾಳಿಂಗ ಮರ್ಧನ’ ಕಥಾವಸ್ತುವನ್ನು ಪ್ರಸ್ತುತಪಡಿಸಿ ನೋಡುಗರ ಮನಸೂರೆಗೊಂಡಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.