ಮಡಿಕೇರಿ: ಮಡಿಕೇರಿಯಲ್ಲಿ ಅ. 2ರಂದು ಅದ್ದೂರಿಯಾಗಿ ನಡೆಯುವ ದಸರಾ ದಶಮಂಟಪಗಳ ಶೋಭಾಯಾತ್ರೆಯ ಇತಿಹಾಸ ಹುಡುಕುತ್ತಾ ಹೋದರೆ ಅದು ಸುಮಾರು 150 ವರ್ಷಗಳಿಗೂ ಹಿಂದಕ್ಕೆ ಹೋಗುತ್ತದೆ. ಭೀಮ್‌ಸಿಂಗ್ ಎಂಬುವವರು ಮೊದಲಿಗೆ ಇಲ್ಲಿ ಮಂಟಪಗಳ ಮೆರವಣಿಗೆಯ ಪರಂಪರೆಗೆ ಬುನಾದಿ ಹಾಕಿರುವುದು ಕಂಡು ಬರುತ್ತದೆ.
ಈ ಕುರಿತು ‘ಪ‍್ರಜಾವಾಣಿ’ ಭೀಮ್‌ಸಿಂಗ್ ಅವರ ಮೊಮ್ಮಗಳು ವಾಸಂತಿ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಈ ಕುರಿತು ಮಾಹಿತಿ ನೀಡಿದರು.
‘ಮೈಸೂರಿನಿಂದ ಇಲ್ಲಿಗೆ ಬಂದು ದೇಚೂರಿನಲ್ಲಿ ರಾಮಮಂದಿರ ಕಟ್ಟಿದವರು ನಾರಾಯಣಸಿಂಗ್. ಅವರು ಮೈಸೂರು ಮಹಾರಾಜರ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮಗ ಅರ್ಜುನ್ ಸಿಂಗ್ ರಾಮಮಂದಿರದಲ್ಲಿ ಪೂಜೆ ಮಾಡುತ್ತಾ, ವಿಜಯದಶಮಿಯ ದಿನ ಪಲ್ಲಕ್ಕಿಯಲ್ಲಿ ದೇವರ ಪಟಗಳನ್ನು ಹೊತ್ತುಕೊಂಡು ಮೆರವಣಿಗೆ ಮಾಡುವ ಪರಂಪರೆಯನ್ನು ಶುರು ಮಾಡಿದರು. ಆಗ ವಿದ್ಯುತ್ ಇಲ್ಲದೇ, ಲಾಟೀನಿನ ಬೆಳಕಿನಲ್ಲಿ ಮೈಸೂರಿನ ದಸರೆ ಮುಗಿದ ಬಳಿಕ ಇಲ್ಲಿ ಮೆರವಣಿಗೆ ಆರಂಭಿಸುತ್ತಿದ್ದರು. ಅವರ ಪುತ್ರ ಅಂದರೆ ನಮ್ಮ ತಾತ ಭೀಮ್‌ಸಿಂಗ್ ಈ ವಿಜಯದಶಮಿಯ ಮೆರವಣಿಗೆಗೆ ಮಂಟಪದ ರೂಪ ನೀಡಿದರು’ ಎಂದು ಅವರು ನೆನಪಿಸಿಕೊಂಡರು.
ಭೀಮ್‌ಸಿಂಗ್ ಅವರ ಜೊತೆ ಪತ್ರಿಕೋದ್ಯಮಿಯಾಗಿದ್ದ ಗೋಪಾಲಕೃಷ್ಣ ಅವರೂ ಸೇರಿ ತೋಡಿನಲ್ಲಿ ಸಿಗುತ್ತಿದ್ದ ಜೇಡಿ ಮಣ್ಣು ತಂದು ಮಣ್ಣಿನ ಮೂರ್ತಿಗಳನ್ನು ಮಾಡಿ, ಅವುಗಳಿಗೊಂದು ಮಂಟಪ ಕಟ್ಟಿ, ಅಲಂಕರಿಸಿ, ವಿಜೃಂಭಣೆಯಿಂದ ಮೆರವಣಿಗೆ ಮಾಡಲು ಅನುವಾದರು. ಆಗ ಇಡೀ ಮಡಿಕೇರಿ ನಗರವನ್ನು ಮೆರವಣಿಗೆ ತಲುಪುತ್ತಿತ್ತು. ನಂತರ, ಮೈಸೂರಿನಿಂದ ಕಲಾವಿದರನ್ನು ಕರೆದುಕೊಂಡು ಬಂದು ದೊಡ್ಡ ದೊಡ್ಡ ಮೂರ್ತಿಗಳನ್ನು ಮಾಡಿಸಿ, ಬ್ಯಾಂಡ್‌ಸೆಟ್, ವಾಲಗದಂತಹ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆ ಮಾಡುತ್ತಿದ್ದರು. ಈ ಕುರಿತ ಚಿತ್ರಗಳು ನಮ್ಮಲ್ಲಿವೆ’ ಎಂದು ಅವರು ಹೇಳಿದರು.
ಸದ್ಯ, ಭೀಮ್‌ಸಿಂಗ್ ಅವರ ಪುತ್ರಿ ಶಾರದಾಬಾಯಿ, ಇವರ ಪುತ್ರ ರವಿಕುಮಾರ್ ಸಿಂಗ್ ಹಾಗೂ ಕುಟುಂಬದವರು ದೇಚೂರಿನಲ್ಲಿ ವಾಸವಿದ್ದಾರೆ. ಇಲ್ಲಿನ ಭೀಮ್‌ಸಿಂಗ್ ರಘುರಾಮಮಂದಿರದಲ್ಲಿ ನವರಾತ್ರಿ ದೇವತಾ ಕಾರ್ಯಗಳನ್ನು ವಿಜೃಂಭಣೆಯಿಂದ ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.