ಮಡಿಕೇರಿ: ಈ ಬಾರಿ 49ನೇ ಮಂಟಪೋತ್ಸವದಲ್ಲಿ ಭಾಗವಹಿಸುತ್ತಿರುವ ಕೋಟೆ ಮಹಾಗಣಪತಿ ದೇಗುಲ ಮಂಟಪ ಸಮಿತಿಯು ‘ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ’ ಎಂಬ ಕಥಾಹಂದರವನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದೆ.
ಕಳೆದ 10 ವರ್ಷಗಳಿಂದಲೂ ನಿರಂತರವಾಗಿ ಬಹುಮಾನ ಪಡೆಯುತ್ತಿರುವ ಈ ಮಂಟಪ ಸಮಿತಿಯು ಪ್ರತಿ ವರ್ಷವೂ ವಿನೂತನವಾಗಿ ಹಾಗೂ ವಿಶೇಷವಾಗಿ ಮಂಟಪಗಳನ್ನು ರೂಪಿಸುವ ಹೆಗ್ಗಳಿಕೆ ಹೊಂದಿದೆ. ಈ ಬಾರಿಯೂ ಅಪರೂಪದ ಕಥಾವಸ್ತುವನ್ನು ಆಯ್ದುಕೊಂಡಿದ್ದು, ಕುತೂಹಲ ಮೂಡಿಸಿದೆ.
ಒಟ್ಟು 27 ಕಲಾಕೃತಿಗಳು ಇದರಲ್ಲಿದ್ದು, ಮೈಸೂರು ಸಮೀಪದ ಉದ್ಬೂರಿನಲ್ಲಿ ಹಾಗೂ ಮಂಗಳೂರಿನಲ್ಲಿ ತಯಾರಾಗುತ್ತಿವೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ವಿಘ್ನೇಶ್, ‘ಈ ಬಾರಿ ವಿಶೇಷವಾಗಿ ಮಂಟಪ ಪ್ರದರ್ಶನ ಇರಲಿದೆ. ಮೊದಲ ಬಹುಮಾನ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದೇವೆ’ ಎಂದು ಹೇಳಿದರು.
ತನ್ನ 30ನೇ ವರ್ಷದ ಮಂಟಪೋತ್ಸವದಲ್ಲಿ ಕರೆವಲೆ ಭಗವತಿ ಮಹಿಷಮರ್ಧಿನಿ ದೇಗುಲ ಮಂಟಪ ಸಮಿತಿಯು ಈ ಬಾರಿ ಆಂಜನೇಯನಿಂದ ದ್ರೋಣಗಿರಿಯನ್ನು ಹೊತ್ತು ತರುವ ಕಥಾ ಸಾರಾಂಶವನ್ನು ಮಂಟಪದಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಒಟ್ಟು 20 ಕಲಾಕೃತಿಗಳನ್ನು ಮೈಸೂರು ಸಮೀಪದ ಉದ್ಬೂರು ನಾಗರಾಜು ಹಾಗೂ ಮಡಿಕೇರಿ ಶೋಮ್ಯಾನ್ ಸಂದೀಪ್ ಅವರು ರೂಪಿಸುತ್ತಿದ್ದಾರೆ. ಈ ಬಾರಿ ಫೈರ್ ಸ್ಟುಡಿಯೊ ವಿಶೇಷವಾಗಿರಲಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಮಂಟಪ ಸಮಿತಿ ಅಧ್ಯಕ್ಷ ವಿನೋದ್ ಕಾರ್ಯಪ್ಪ ‘ಬಹಳ ಶಿಸ್ತಿನಿಂದ ಮಂಟಪ ರೂಪಿಸಲಾಗುತ್ತಿದೆ. ವಿಶೇಷಗಳನ್ನು ಪ್ರದರ್ಶನ ಒಳಗೊಂಡಿದೆ’ ಎಂದರು. ಸಮಿತಿಯ ಗೌರವಾಧ್ಯಕ್ಷ ಗಜೇಂದ್ರ ಕುಶ ಪ್ರತಿಕ್ರಿಯಿಸಿ ‘ಈ ಕಥಾವಸ್ತು ಬಹಳ ವಿಶೇಷವಾಗಿರಲಿದೆ. ಅತಿ ದೊಡ್ಡ ಕಲಾಕೃತಿಗಳನ್ನು ರೂಪಿಸಲಾಗುತ್ತಿದೆ. ಪ್ರದರ್ಶನದ ವೇಳೆ ವಿಶೇಷಗಳು ಗೊತ್ತಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.