ಮಡಿಕೇರಿ: ಅತ್ಯಂತ ದುಬಾರಿ ಬೆಲೆಯವು, ಅಪರೂಪ ಎನಿಸುವಂತವು, ಅತಿ ಎತ್ತರದ್ದು, ಮಾತ್ರವಲ್ಲ ಅತಿ ಗಿಡ್ಡ ಶ್ವಾನಗಳು ಅಲ್ಲಿದ್ದವು. ಕೆಲವು ಶ್ವಾನಗಳನ್ನು ನೋಡಿ ಸಾರ್ವಜನಿಕರು ಅವಕ್ಕಾದರು. ಅಪರೂಪದ ಶ್ವಾನಗಳ ಚಿತ್ರಗಳನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡರು. ಚಿಕ್ಕ ಮಕ್ಕಳೂ ಶ್ವಾನಗಳನ್ನು ಚಕಿತ ಕಣ್ಣುಗಳಿಂದ ವೀಕ್ಷಿಸಿದರು.
ಈ ಎಲ್ಲ ದೃಶ್ಯಗಳೂ ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ ಯುವ ದಸರಾ ಸಮಿತಿ ವತಿಯಿಂದ ನಡೆದ ‘ಶ್ವಾನ ಪ್ರದರ್ಶನ’ದಲ್ಲಿ ಕಂಡು ಬಂತು.
ಒಟ್ಟು ವಿವಿಧ 24 ತಳಿಗಳ 86 ಶ್ವಾನಗಳು ಬಂದಿದ್ದವು. ಅವುಗಳಲ್ಲಿ ಅಪರೂಪ ಎನಿಸುವಂತಹ ಬುಲ್ ಟೆರಿಯರ್ ತಳಿಯ ಶ್ವಾನವೂ ಇತ್ತು. ಮಿನಿ ಎಚರ್, ಪಿಂಚರ್‌ನಂತಹ ಗಿಡ್ಡ ಎನಿಸುವ ತಳಿಗಳು ಪುಟ್ಟ ಮಕ್ಕಳನ್ನು ಸೆಳೆಯಿತು.. ಎತ್ತರದ ಗ್ರೇಟ್ ಡೇನ್ ತಳಿಯ ಶ್ವಾನ ಸೂಜಿಗಲ್ಲಿನಂತೆ ಸೆಳೆಯಿತು. ದುಬಾರಿ ಬೆಲೆಯ ಗ್ರೇಟ್ ಡೇನ್, ಸೈಬಿರಿಯನ್ ಹಸ್ಕಿ ಶ್ವಾನಗಳೂ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.
ಎತ್ತರದ ಸೈಬಿರಿಯನ್ ಹಸ್ಕಿ ತಳಿಯ 11 ಶ್ವಾನಗಳು ಪ್ರದರ್ಶನಕ್ಕೆ ಬಂದಿದ್ದು ವಿಶೇಷ ಎನಿಸಿತ್ತು. ಕೇವಲ ಕೊಡಗು ಮಾತ್ರವಲ್ಲ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಮಂಗಳೂರು, ಹುಣಸೂರು ಹಾಗೂ ಪಿರಿಯಾಪಟ್ಟಣಗಳಿಂದಲೂ ಜನರು ತಮ್ಮ ತಮ್ಮ ಶ್ವಾನಗಳನ್ನು ಇಲ್ಲಿಗೆ ಕರೆ ತಂದಿದ್ದರು.
ಮುಧೋಳ್ ತಳಿಯ ಶ್ವಾನ ಸೇರಿದಂತೆ ರಾಟ್ ವೀಲರ್, ಡೊಬರ್ ಮ್ಯಾನ್, ಲ್ಯಾಬ್ರೊಡರ್, ಲಾಸ್‌ಎಪ್ಸೊ, ಡ್ಯಾಶ್ ಊಂಡ್, ಫಗ್, ಜರ್ಮನ್ ಶೆಫರ್ಡ್ ತಳಿಯ ಶ್ವಾನಗಳೂ ಸಹ ಜನರನ್ನು ಆಕರ್ಷಿಸಿದವು.
ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಲಿಂಗರಾಜ ದೊಡ್ಡಮನಿ, ಪಾಲಿಕ್ಲಿನಿಕ್‌ನ ಉಪನಿರ್ದೇಶಕ ಡಾ.ತಿಮ್ಮಯ್ಯ, ಡಾ.ಪ್ರಸನ್ನ, ಡಾ.ಚಿದಾನಂದ, ಡಾ.ಅಯ್ಯಪ್ಪ ಭಾಗವಹಿಸಿದ್ದರು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಯುವ ದಸರೆ ಪ್ರಯುಕ್ತ ನಡೆದ ಉದ್ಯೋಗ ಮೇಳದಲ್ಲಿ 15 ಕಂಪೆನಿಗಳು ಭಾಗವಹಿಸಿದ್ದವು. 75ಕ್ಕೂ ಅಧಿಕ ಉದ್ಯೋಗಾಂಕ್ಷಿಗಳು ಬಂದಿದ್ದರು.
ಸೈಕಲ್ ಬೈಕ್ ಜಾಥಾ ಇಂದು
ಯುವದಸರೆ ಪ್ರಯುಕ್ತ ಸೆ. 27ರಂದು ಬೆಳಿಗ್ಗೆ 7 ಗಂಟೆಗೆ ಮಡಿಕೇರಿಯ ಸುದರ್ಶನ ವೃತ್ತದಿಂದ ಸೈಕಲ್ ಜಾಥಾ ನಡೆಯಲಿದೆ. ಇದು ಜನರಲ್ ತಿಮ್ಮಯ್ಯ ವೃತ್ತ ಖಾಸಗಿ ಬಸ್‌ನಿಲ್ದಾಣ ಕಾವೇರಿ ಹಾಲ್ ಮೂಲಕ ಎಲ್‌ಐಸಿ ಮೂಲಕ ಗಾಂಧಿ ಮೈದಾನ ತಲುಪಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಗಾಂಧೀ ಮೈದಾನದಿಂದ ಬೈಕ್ ಜಾಥಾ ನಡೆಯಲಿದೆ. ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಐಶ್ವರ್ಯ ರಂಗರಾಜನ್ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್.ಎಂ.ಪಾಟೀಲ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.