ಮಡಿಕೇರಿ: ಕಳೆದ ವರ್ಷವಷ್ಟೇ ಸುವರ್ಣ ಮಹೋತ್ಸವ ಆಚರಿಸಿಕೊಂಡು 51ನೇ ವರ್ಷಕ್ಕೆ ಅಡಿ ಇಟ್ಟಿರುವ ಇಲ್ಲಿನ ಕೋದಂಡರಾಮ ದೇವಾಲಯ ಸಮಿತಿಯು ಈ ಬಾರಿ ತನ್ನ ಮಂಟಪದಲ್ಲಿ ಪ್ರದರ್ಶಿಸಲು ಅಪರೂಪದ ಕಥಾವಸ್ತುವೊಂದನ್ನು ಆಯ್ದುಕೊಂಡಿದೆ.
ಹಲವು ವಿಶೇಷತೆಗಳನ್ನು ಒಳಗೊಂಡ ‘ಶ್ರೀ ಕ್ಷೇತ್ರ ಅದಿಚುಂಚನಗಿರಿ ಕಾಲ ಭೈರವ ಮಹಾತ್ಮೆ’ ಎಂಬ ಕಥಾವಸ್ತುವನ್ನು ಪ್ರದರ್ಶನಕ್ಕಾಗಿ ಆಯ್ದುಕೊಂಡಿದೆ. ಈ ಕಥಾವಸ್ತು ಇದೇ ಮೊದಲ ಬಾರಿಗೆ ಪ್ರದರ್ಶನವಾಗುತ್ತಿರುವುದು ವಿಶೇಷ ಎನಿಸಿದೆ.
‘ಶಿವಪುರಾಣದಲ್ಲಿರುವ ಈ ಕಥಾವಸ್ತುವಿನೊಳಗೆ 2 ಕಥಾವಸ್ತುಗಳಿರುವುದು ಮತ್ತೂ ವಿಶೇಷ ಎನಿಸಿದೆ. ಬ್ರಹ್ಮನ ಅಹಂಕಾರ ಮುರಿಯುವ ಹಾಗೂ ಆದಿಚುಂಚನ ಸಂಹಾರ ಎಂಬ ಎರಡು ಕಥೆಗಳು ಪ್ರದರ್ಶನದಲ್ಲಿರಲಿವೆ. ಇದರಲ್ಲಿ ಒಟ್ಟು 16 ಕಲಾಕೃತಿಗಳಿದ್ದು, ಮೈಸೂರು ಸಮೀಪದ ಉದ್ಭೂರು ಮತ್ತು ಮಡಿಕೇರಿಯಲ್ಲಿ ತಯಾರಾಗುತ್ತಿವೆ’ ಎಂದು ಸಮಿತಿ ಅಧ್ಯಕ್ಷ ಆನಂದ್ ಸುಬ್ರಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಾರಿ ಮಂಟಪದಲ್ಲಿ ಹಲವು ವಿಶೇಷಗಳಿದ್ದು, ಅದು ಪ್ರದರ್ಶನದ ದಿನ ಗೊತ್ತಾಗಲಿದೆ.
ಕಳೆದ ವರ್ಷ ಈ ಮಂಟಪವು ‘ರಾಮನಿಂದ ರಾವಣನ ಸಂಹಾರ’ದ ಕಥಾವಸ್ತುವನ್ನು ಪ್ರದರ್ಶಿಸಿ ಜನಮನಸೂರೆಗೊಂಡಿತ್ತು. ರಾವಣನ ಬೃಹತ್ ಆಕಾರದ ಮೂರ್ತಿಯು ಜನಾಕರ್ಷಣೀಯವಾಗಿತ್ತು.
ಉಗ್ರ ನರಸಿಂಹನ ಉಗ್ರಾವತಾರ ಶಮನ ನೋಡಲು ಶೋಭಾಯಾತ್ರೆಗೆ ಬನ್ನಿ
ಸುವರ್ಣ ಮಹೋತ್ಸವದ ಸಡಗರದಲ್ಲಿರುವ ಇಲ್ಲಿನ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ತನ್ನ 50ನೇ ವರ್ಷದ ಪ್ರದರ್ಶನಕ್ಕೆಂದು ಅಪರೂಪದ ಹಾಗೂ ಹೆಚ್ಚಿನ ಜನರಿಗೆ ಗೊತ್ತಿರದ ಕಥಾವಸ್ತುವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ. ‘ಶರಭವತಾರ ಮತ್ತು ಪ್ರತ್ಯಂಗಿರಾ ದೇವಿಯಿಂದ ಉಗ್ರ ನರಸಿಂಹನ ಉಗ್ರಾವತಾರ ಶಮನ’ ಎಂಬ ದೀರ್ಘ ಶೀರ್ಷಿಕೆಯುಳ್ಳ ಕಥಾವಸ್ತು ಸಹಜವಾಗಿಯೆ ಕುತೂಹಲಕ್ಕೆ ಕಾರಣವಾಗುತ್ತದೆ. ಈ ಕುರಿತು ‘ಪ್ರಜಾವಾಣಿ’ ಸಮಿತಿಯ ಗೌರವಾಧ್ಯಕ್ಷ ಯೋಗೇಶ್ ಅವರನ್ನು ಸಂಪರ್ಕಿಸಿದಾಗ ಅವರು ‘ಉಗ್ರನರಸಿಂಹ ಅವತಾರವಾಗಿ ಹಿರಣ್ಯಕಶ್ಯಪುವನ್ನು ಸಂಹರಿಸಿ ಪ್ರಹ್ಲಾದನನ್ನು ರಕ್ಷಿಸುವ ಕಥೆ ಎಲ್ಲರಿಗೂ ತಿಳಿದಿದೆ. ಆದರೆ ಇದರ ಮುಂದೇನಾಗುತ್ತದೆ ಎಂಬುದನ್ನು ನಾವು ಮಂಟಪದಲ್ಲಿ ಪ್ರದರ್ಶಿಸಲಿದ್ದೇವೆ. ಒಂದು ರೀತಿಯಲ್ಲಿ ಇದು ದೇವರು ದೇವರುಗಳ ನಡುವಿನ ಕಾಳಗ’ ಎಂದು ಹೇಳಿದರು. ಒಟ್ಟು 25 ಕಲಾಕೃತಿಗಳಿದ್ದು ಇವುಗಳು ಮೈಸೂರು ಸಮೀಪದ ಉದ್ಬೂರಿನಲ್ಲಿ ತಯಾರಾಗುತ್ತಿವೆ ಎಂದರು. ಕಳೆದ ವರ್ಷ ‘ಕೃಷ್ಣನ ಬಾಲಲೀಲೆ’ ಕಥಾವಸ್ತು ಪ್ರದರ್ಶಿಸಿ ಜನಮನ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.