ADVERTISEMENT

ಅರಿವು ಇಲ್ಲದವರಿಗೆ, ನೊಂದವರಿಗೆ ಕಾನೂನಿನ ಮಾಹಿತಿ ನೀಡಿ: ಹೊಸಮನಿ ಪುಂಡಲಿಕ

ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:22 IST
Last Updated 19 ಫೆಬ್ರುವರಿ 2026, 3:22 IST
ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲಿಕ ಅವರು ಚಾಲನೆ ನೀಡಿದರು
ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲಿಕ ಅವರು ಚಾಲನೆ ನೀಡಿದರು   

ಮಡಿಕೇರಿ: ಕಾನೂನಿನ ಅರಿವು ಇಲ್ಲದವರಿಗೆ ಮತ್ತು ನೊಂದವರಿಗೆ ಕಾನೂನಿನ ಮಾಹಿತಿ ನೀಡುವುದೇ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಜವಾಬ್ದಾರಿಯಾಗಿದೆ. ಹಾಗಾಗಿ, ಸ್ವಯಂಸೇವಕರು ಆಸಹಾಯಕರು ಹಾಗೂ ಮುಖ್ಯವಾಹಿನಿಯಿಂದ ದೂರವಿರುವ ನಾಗರಿಕರಿಗೆ ಕಾನೂನಿನ ಮಾಹಿತಿ ನೀಡಬೇಕು ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲಿಕ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಔಟಲಾ ಇಂಡಿಯಾ ಸಂಸ್ಥೆ ಹಾಗೂ ಮಡಿಕೇರಿ ವಕೀಲರ ಸಂಘದ ವತಿಯಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗಾಗಿ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ 4  ದಿನಗಳ ಕಾಲ ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದ ಜೊತೆ ಸೇರಿ ನೊಂದವರಿಗೆ ಕಾನೂನಿನ ಮಾಹಿತಿ ನೀಡುವುದು ಅರೆಕಾಲಿಕ ಕಾನೂನು ಸ್ವಯಂ ಸೇವಕರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಅವರು ಸಲಹೆ ನೀಡಿದರು.

ADVERTISEMENT

ನಿಯಮಗಳನ್ನು ಪಾಲಿಸದಿದ್ದರೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ  ಆ ನಿಟ್ಟಿನಲ್ಲಿ ಕಾನೂನು ಸೇವೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಹಿರಿಯ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಣಂ ಮಾತನಾಡಿ, ‘ಕಾನೂನು ಒಂದು ದೊಡ್ಡ ವಿಸ್ತಾರವಿದ್ದಂತೆ, ಅರಿವೇ ಗುರುವೇ ಎಂಬಂತೆ ಎಲ್ಲರೂ ಉತ್ತಮ ಬದುಕು ನಡೆಸುವಂತಾಗಬೇಕು. ಕಾನೂನಿನ ಬೆಳಕು ಎಲ್ಲೆಡೆ ಇರಬೇಕು. ಸ್ವಲ್ಪವಾದರೂ ಕಾನೂನಿನ ಜ್ಞಾನವಿದ್ದರೆ ಇತರರಿಗೆ ನೋವು ಉಂಟು ಆಗದಂತೆ ನಡೆದುಕೊಳ್ಳಬಹುದು’ ಎಂದು ಅಭಿಪ್ರ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಮಾತನಾಡಿ, ‘ಜಿಲ್ಲೆಯಲ್ಲಿ ಅರೆಕಾಲಿಕ ಸ್ವಯಂ ಸೇವಕರು 97 ಮಂದಿ ನೋಂದಣಿ ಮಾಡಿದ್ದು, ಇವರಲ್ಲಿ 70ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ’ ಎಂದರು.

ವಕೀಲರಾದ ಎಂ,ಎ.ನಿರಂಜನ್ ಅವರು ಕೌಟುಂಬಿಕ ಕಾನೂನುಗಳ ಕುರಿತು ಮಾತನಾಡಿದರು.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ಕಾಯ್ದೆ ಕುರಿತು ಮಾತನಾಡಿದರು. ಔಟಲಾ ಇಂಡಿಯಾ ಸಂಸ್ಥೆಯುವರು ಕಾನೂನು ಅರಿವು ಕುರಿತು ಮಾತನಾಡಿದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಸಿ.ವೀರಭದ್ರಯ್ಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಡಿ.ಎಸ್.ವಿನುತಾ, ತರಬೇತುದಾರರಾದ ಮೀಮಾನ್ಸ ಸಿಂಗ್, ಶಮಾ ಡಿ., ನಿಹಾರಿಕಾ ನಾಯ್ಡು, ಕಾನೂನು ನೆರವು ಅಭಿರಕ್ಷಕರಾದ ಮೈಮುನಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರು
ಕಾನೂನು ಸೇವಾ ಪ್ರಾಧಿಕಾರದಿಂದ ಮಾಹಿತಿ ಪಡೆದು ಇತರರಿಗೂ ಮಾಹಿತಿ ನೀಡಬೇಕು. ಆ ದಿಸೆಯಲ್ಲಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಪಾತ್ರ ಹೆಚ್ಚಿನದ್ದಾಗಿದೆ
ಸಿ.ಟಿ.ಜೋಸೆಫ್ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.