
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಗಳ ಕಾಟ ಉಲ್ಬಣಿಸಿದ್ದು, ಬೆಳೆಗಾರರು ಅಕ್ಷರಶಃ ಹತಾಶರಾಗಿದ್ದಾರೆ. ಕೋತಿ ಹಿಂಡುಗಳು ತೋಟವನ್ನು ಹೊಕ್ಕಿತೆಂದರೆ ಇಡೀ ತೋಟವೇ ಸರ್ವನಾಶ ಎನ್ನುವ ಸ್ಥಿತಿ ಸೃಷ್ಟಿಯಾಗಿದೆ. ಇದೀಗ ಅರಣ್ಯ ಇಲಾಖೆ ಮಂಗಗಳ ಸೆರೆ ಹಿಡಿಯಲು ಅನುಮತಿ ನೀಡುವಂತೆ ಇಲಾಖೆಯ ಕೇಂದ್ರ ಕಚೇರಿಗೆ ಮನವಿಯನ್ನೂ ಸಲ್ಲಿಸಿದ್ದು, ಮಂಗಗಳನ್ನು ಸೆರೆ ಹಿಡಿಯುವ ನುರಿತರಿಗಾಗಿ ಹುಡುಕಾಟ ನಡೆಸಿದೆ. ಮತ್ತೊಂದೆಡೆ ಇದು ಕೇವಲ ತಾತ್ಕಾಲಿಕ ಪರಿಹಾರ ಕ್ರಮವಷ್ಟೇ, ಕಾಡಿನೊಳಗಿರುವ ಲಂಟಾನ ತೆರವುಗೊಳಿಸಿ ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.
ಕೊಡಗು ಜಿಲ್ಲೆಯ ಗಡಿ ಭಾಗ ಸಂಪಾಜೆ ವ್ಯಾಪ್ತಿಯಲ್ಲಂತೂ ಮಂಗಗಳ ಕಾಟ ಹೇಳತೀರದಾಗಿದೆ. ಅಲ್ಲಿ ಮಾತ್ರವಲ್ಲ, ಮಡಿಕೇರಿ ತಾಲ್ಲೂಕಿನ ಬಿಳಿಗೇರಿ, ಕಗ್ಗೋಡ್ಲು, ಅರ್ವತ್ತೊಕ್ಲು ಸೇರಿದಂತೆ ಇನ್ನೂ ಅನೇಕ ಭಾಗಗಳಲ್ಲಿ ಮಂಗಗಳು ಇನ್ನಿಲ್ಲದ ಉಪದ್ರವ ಕೊಡುತ್ತಿವೆ.
‘ಕಾಡಾನೆ ಕಾಟಕ್ಕಿಂತಲೂ ಮಂಗಗಳ ಕಾಟವನ್ನು ಸಹಿಸಲಾಗದು’ ಎಂದು ಸಾಕಷ್ಟು ಬೆಳೆಗಾರರು ಹೇಳುತ್ತಿದ್ದಾರೆ. ಕಾಡಾನೆಯೊಂದು ತೋಟ ಹೊಕ್ಕರೆ ಅಥವಾ ನಾಲ್ಕಾರು ಆನೆಗಳು ಹೊಕ್ಕರೆ ಅವು ನಡೆದಾಡುವ ಜಾಗ ಮಾತ್ರ ಹಾಳಾಗುತ್ತದೆ. ಆದರೆ, ಸುಮಾರು 70ರಿಂದ 80ರಷ್ಟು ಸಂಖ್ಯೆಯಲ್ಲಿರುವ ಒಂದು ಮಂಗಗಳ ಹಿಂಡು ತೋಟ ಹೊಕ್ಕರೆ ಇಡೀ ತೋಟವೇ ನಾಶವಾಗುತ್ತಿದೆ.
ಮಂಗಗಳು ಬೆಳೆ ತಿನ್ನುವುದಕ್ಕಿಂತ ನಾಶ ಮಾಡುವುದು ಹೆಚ್ಚು. ತೆಂಗಿನ ಮರದಲ್ಲಿ ಒಂದು ಎಳನೀರು ಕುಡಿದರೆ ಆ ಮರದಲ್ಲಿ ಮುಂದೆ ಎಳನೀರು ಆಗಲಿರುವ ಕಾಯಿಗಳನ್ನೆಲ್ಲ ಕಿತ್ತೆಸೆಯುತ್ತದೆ. ಬಹಳಷ್ಟು ಕಡೆ ಒಂದು ಎಕರೆ ಬಾಳೆ ತೋಟದಲ್ಲಿ ಒಂದೇ ಒಂದು ಬಾಳೆಹಣ್ಣು ಸಹ ಕೈಗೆ ಸಿಗದಂತೆ ಮಂಗಗಳು ಮಾಡಿವೆ ಎಂದು ಸಂಪಾಜೆ ಭಾಗದ ರೈತರು ದೂರುತ್ತಾರೆ.
ತೋಟದಲ್ಲಿ ಕೇವಲ ತೆಂಗಿನಮರ ಮಾತ್ರವಲ್ಲ ಎಲ್ಲ ಬಗೆಯ ತೋಟಗಾರಿಕಾ ಬೆಳೆಗಳನ್ನೂ ಇವು ಹಾಳುಗೆಡವುತ್ತಿವೆ. ಸಪೋಟದಂತಹ ಹಣ್ಣಿನ ಗಿಡಗಳಲ್ಲಿರುವ ಫಲಗಳೆಲ್ಲವನ್ನೂ ಅವು ಮಣ್ಣು ಪಾಲು ಮಾಡುತ್ತಿವೆ. ದುಬಾರಿ ಬೆಳೆ ಲಿಚಿ ಹಣ್ಣು ಈಗ ಫಲ ಬಿಡಲು ಆರಂಭಿಸಿದ್ದು, ಅವುಗಳನ್ನೂ ಈ ಮಂಗಗಳು ಬಿಡುತ್ತಿಲ್ಲ. ಪಪ್ಪಾಯ ಹಣ್ಣನ್ನು ತಿನ್ನುವುದಿರಲಿ, ಗಿಡಗಳನ್ನೇ ಸೀಳಿ ಹಾಕುತ್ತಿವೆ. ಇದೀಗ ಕಾಫಿ ಗಿಡಗಳ ಮೇಲೂ ತಮ್ಮ ದಾಳಿ ಆರಂಭಿಸಿದ್ದು, ಕಾಫಿ ಹಣ್ಣನ್ನು ತಿಂದು, ಉದುರಿಸಿ, ಗಿಡಗಳ ಕೊಂಬೆಗಳನ್ನು ಮುರಿದು ನಾಶ ಮಾಡುತ್ತಿದೆ.
ಕೇವಲ ತೋಟಗಳಿಗೆ ಮಾತ್ರವಲ್ಲ, ಮನೆಯಂಗಳಕ್ಕೂ ವಾನರ ಸೇನೆ ದಾಳಿ ಇಡುತ್ತಿದೆ. ಮನೆಯಂಗಳದಲ್ಲಿ ಬೆಳೆದ ಎಲ್ಲ ತರಕಾರಿಗಳನ್ನೂ ನಾಶಪಡಿಸುತ್ತಿದೆ. ಇದೀಗ ಮನೆಯೊಳಕ್ಕೂ ನುಗ್ಗಿ ದಾಂದಲೆ ನಡೆಸುತ್ತಿವೆ. ಕೊಯನಾಡು ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿ ಸಾಮಗ್ರಿಗಳನ್ನು ನಾಶಪಡಿಸಿದ ಘಟನೆಗಳು ನಡೆದಿವೆ.
ಬುದ್ಧಿವಂತ ಮಂಗಗಳು
ಮಂಗಗಳನ್ನು ಓಡಿಸಲು ಬೆಳೆಗಾರರು ಕ್ಯಾಟರ್ ಬಿಲ್ಲಿನ ಮೂಲಕ ಕಲ್ಲು ಹೊಡೆಯುವುದು, ಪಟಾಕಿ ಸಿಡಿಸುವುದನ್ನು ಮಾಡುತ್ತಿದ್ದರು. ಆದರೆ, ಈಗ ದಾಳಿ ನಡೆಸುತ್ತಿರುವ ಮಂಗಗಳು ಬುದ್ಧಿವಂತ ಮಂಗಗಳಾಗಿದ್ದು, ಒಂದು ಕಲ್ಲೇಟು ಬೀಳುತ್ತಿದ್ದಂತೆ ದೂರ ಹೋಗಿಬಿಡುತ್ತವೆ. ತೋಟದ ಕೆಲಸಗಾರರು ತೆರಳುತ್ತಿದ್ದಂತೆ ಮತ್ತೆ ತೋಟಕ್ಕೆ ಬರುತ್ತಿವೆ. ಇನ್ನು ಕೆಲವೆಡೆ ಕಲ್ಲು ತಾಗದಂತೆ ಕಾಫಿ ಗಿಡಗಳ ಕೆಳಗೆ ಮರೆಯಾಗಿ, ಅಲ್ಲಿಯೇ ನಡೆದಾಡುತ್ತಿರುತ್ತವೆ. ಇದರಿಂದ ಇವುಗಳನ್ನು ಗುರುತಿಸಲು ಸಾಧ್ಯವಾಗದೇ ಬೆಳೆಗಾರರು ಪರಿತಪಿಸುವಂತಾಗಿದೆ.
ಬೇರೆ ಕಡೆಯಿಂದ ತಂದು ಬಿಡುತ್ತಾರೆ!
ಮಂಗಗಳನ್ನು ಬೇರೆಡೆಯಿಂದ ತಂದು ಇಲ್ಲಿಗೆ ಬಿಡುತ್ತಿರುವುದರಿಂದಲೆ ಇತ್ತೀಚಿನ ದಿನಗಳಲ್ಲಿ ಮಂಗಗಳ ಕಾಟ ಉಲ್ಬಣಿಸುತ್ತಿರುವುದಕ್ಕೆ ಮುಖ್ಯ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಕೇರಳ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಮಂಗಗಳನ್ನು ತಂದು ಬಿಡುತ್ತಿದ್ದಾರೆ. ಇದರಿಂದ ಇದ್ದಕ್ಕಿದ್ದಂತೆ ಮಂಗಗಳ ಕಾಟ ಅತಿಯಾಗಿದೆ ಎಂದು ಅವರು ಹೇಳುತ್ತಾರೆ. ಒಂದು ಹಿಂಡು ಹೋಯಿತು ಎಂದು ಸಮಾಧಾನಪಡುವಷ್ಟರಲ್ಲಿ ಮತ್ತೊಂದು ಹಿಂಡು ತೋಟಕ್ಕೆ ನುಗ್ಗಿರುತ್ತದೆ. ಬಹಳಷ್ಟು ಬಾರಿ ಎರಡು ಹಿಂಡಿನ ನಡುವೆ ಜಗಳಗಳೂ ಆಗಿವೆ. ಆ ವೇಳೆ ನಡುವೆ ಸಿಕ್ಕ ಬೆಳೆಗಾರರು, ಕಾರ್ಮಿಕರ ಮೇಲೂ ಇವುಗಳು ದಾಳಿಗೆ ಮುಂದಾಗಿವೆ.
ಸೆರೆ ಹಿಡಿಯಲು ಅನುಮತಿ ಕೋರಿದ ಅರಣ್ಯಾಧಿಕಾರಿಗಳು ಈ ಹಿಂದೆ ಮಂಗಗಳನ್ನು ಸೆರೆ ಹಿಡಿಯಲು ಅನುಮತಿ ನೀಡುವ ಅಧಿಕಾರಿ ಸಿಸಿಎಫ್ ದರ್ಜೆಯ ಅಧಿಕಾರಿಗಳಿಗೆ ಇತ್ತು. ಆದರೆ ಈಗ ಸರ್ಕಾರ ಈ ಅಧಿಕಾರವನ್ನು ಎಪಿಸಿಸಿಎಫ್ ದರ್ಜೆಯ ಅಧಿಕಾರಿಗಳಿಗೆ ನೀಡಿದೆ. ಹಾಗಾಗಿ ಕೊಡಗು ಜಿಲ್ಲೆಯ ಅರಣ್ಯಾಧಿಕಾರಿಗಳು ಎಪಿಸಿಸಿಎಫ್‌ಗೆ ಈಗಾಗಲೆ ಸೆರೆ ಹಿಡಿಯಲು ಕೋರಿ ಪತ್ರ ಬರೆದಿದ್ದಾರೆ.
ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಅರಣ್ಯದಲ್ಲಿ ಈಗ ಲಂಟಾನ ಸೇರಿದಂತೆ ವಿವಿಧ ಕಳೆಗಿಡಗಳು ಹೆಚ್ಚಾಗಿವೆ. ಹಣ್ಣಿನ ಗಿಡಗಳನ್ನು ಹುಡುಕುವಂತಹ ಸ್ಥಿತಿ ಇದೆ. ಕಾಡಿನಲ್ಲಿರುವ ಲಂಟಾನ ತೆರವುಗೊಳಿಸಿ ಸಾಕಷ್ಟು ಹಣ್ಣಿನ ಗಿಡಗಳನ್ನು ನೆಡುವುದೇ ಮಂಗಗಳ ಕಾಟಕ್ಕೆ ಮಾತ್ರವಲ್ಲ ಮಾನವ– ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ. ಸ್ಮಿತಾ ಅಮೃತ್‌ರಾಜ್ ಸಾಹಿತಿ ಚೆಂಬು ಗ್ರಾಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.