ADVERTISEMENT

ಮಡಿಕೇರಿ: ಅನುದಾನ ಖರ್ಚಾಯ್ತು, ಜನರಿಂದ ದೂರವುಳಿಯಿತು!

ಪ್ರವಾಸಿಗರ ನೆಚ್ಚಿನ ತಾಣವಾಗಿ ಪರಿವರ್ತಿಸಲು ವಿಫಲವಾದ ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆ

ವಿಕಾಸ್ ಬಿ.ಪೂಜಾರಿ
Published 6 ಡಿಸೆಂಬರ್ 2019, 19:30 IST
Last Updated 6 ಡಿಸೆಂಬರ್ 2019, 19:30 IST
ಮಡಿಕೇರಿ ಆಕಾಶವಾಣಿ ಸಮೀಪದ ‘ನೆಹರೂ ಮಂಟಪ’
ಮಡಿಕೇರಿ ಆಕಾಶವಾಣಿ ಸಮೀಪದ ‘ನೆಹರೂ ಮಂಟಪ’   

ಮಡಿಕೇರಿ: ಇಲ್ಲಿನ ಆಕಾಶವಾಣಿ ಕೇಂದ್ರ ಕಚೇರಿಯ ಬಳಿಯ ‘ನೆಹರೂ ಮಂಟಪ’ವು ನವೀಕರಣಗೊಂಡಿದ್ದರೂ, ಪ್ರವಾಸಿಗರನ್ನು ಸೆಳೆಯಲು ವಿಫಲವಾಗಿದೆ.

ನವೀಕರಣದ ಹೆಸರಿನಲ್ಲಿ ಕೆಲವರು ಹಣ ಮಾಡಲು ಮಾತ್ರ ಹೊಸ ಸ್ಪರ್ಶ ಕೊಟ್ಟರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಾಡು ಮಾಡುವುದೇ ಆಗಿದ್ದರೆ ಈ ವೇಳೆಗೆ ಅಲ್ಲಿ ಪ್ರವಾಸಿಗರ ಕಲರವ ಕೇಳಿ ಬರಬೇಕಿತ್ತು. ಪ್ರಚಾರದಿಂದಲೂ ದೂರ ಉಳಿದ ನೆಹರೂ ಮಂಟಪ ಪ್ರವಾಸಿಗರ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ!

ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಸುಮಾರು ₹18ಲಕ್ಷ ವೆಚ್ಚದಲ್ಲಿ ಹೊಸ ಸ್ಪರ್ಶ ನೀಡಲಾಗಿತ್ತು. ಪ್ರಕೃತಿ ಸೊಬಗು ಪ್ರವಾಸಿಗರಿಗೆ ಉಣಬಡಿಸಲು ತಯಾರಾಗಿದ್ದರೂ, ಪ್ರಚಾರದ ಕೊರತೆಯಿಂದ ಆಕರ್ಷಕ ಮಂಟಪ ಪ್ರವಾಸಿಗರಿಂದ ಮತ್ತೆ ದೂರ ಉಳಿದಿದೆ.

ADVERTISEMENT

ನಿರ್ವಹಣೆ ಕೊರತೆಯಿಂದ ಕುಡುಕರ, ಪುಂಡ –ಪೋಕುರಿಗಳ ತಾಣವಾಗಿ ಮಾರ್ಪಟ್ಟಿದ್ದ ವೀಕ್ಷಣಾ ಗೋಪುರವೊಂದು ಹೊಸ ರೂಪದೊಂದಿಗೆ ಪ್ರವಾಸಿಗರ ಸೆಳೆಯುವಂತೆ ಮಾಡುವ ಉದ್ದೇಶಿಸಲಾಗಿತ್ತು. ಆದರೆ, ಪ್ರಮುಖ ಉದ್ದೇಶವೇ ಮತ್ತೆ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವಾಸಕ್ಕೆಂದು ನಗರಕ್ಕೆ ಬರುವವರು ರಾಜಾಸೀಟ್, ರಾಜರಕೋಟೆ, ಗದ್ದುಗೆ, ಅಬ್ಬಿ ಫಾಲ್ಸ್, ಓಂಕಾರೇಶ್ವರ ದೇಗುಲಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಾರೆ. ರಾಜಾಸೀಟ್ ಪಕ್ಕದಲ್ಲೇ ನೆಹರೂ ಮಂಟಪವಿದ್ದರೂ ಪ್ರವಾಸಿಗರ ಕಣ್ಣಿಗೆ ಬೀಳುತ್ತಿಲ್ಲ. ಪಕ್ಕದಲ್ಲೇ ನೆಹರೂ ಮಂಟಪವಿದೆ ಎಂಬ ಒಂದೇ ಒಂದು ನಾಮಫಲಕವೂ ಅಲ್ಲಿ ಕಣ್ಣಿಗೆ ಬೀಳುವುದಿಲ್ಲ. ಅಷ್ಟರಮಟ್ಟಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ನಗರದ ನಾಗರಿಕರು ದೂರಿದ್ದಾರೆ.

ಈ ಹಿಂದೆ ಹಾಳು ಕೊಂಪೆಯಾಗಿದ್ದ ಮಂಟಪ ಯಾರಿಗೂ ಬೇಡವಾಗಿತ್ತು. ಮಂಟಪದ ಸುತ್ತ ಕಾಡು ಬೆಳೆದು ಮಂಟಪಕ್ಕೆ ಹೋಗಲು ಅಸಾಧ್ಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವು ಕಿಡಿಗೇಡಿಗಳು, ಮದ್ಯದ ಬಾಟಲಿ, ಇಸ್ಪೀಟ್‌, ಸಿಗರೇಟ್ ತುಂಡುಗಳು ರಾರಾಜಿಸುತ್ತಿದ್ದವು.

ಅನೈತಿಕ ತಾಣವಾಗಿ ಎಲ್ಲರಿಂದಲೂ ದೂರವಾಗಿತ್ತು. ಜಿಲ್ಲಾಡಳಿತವು ಅಭಿವೃದ್ಧಿಗೆ ಪ್ರವಾಸಿ ಇಲಾಖೆ ಹಾಗೂ ತೋಟಗಾರಿಗೆ ಇಲಾಖೆಗೆ ಸೂಚಿಸಿತ್ತು. ಅದರಂತೆ ವರ್ಷದ ಹಿಂದೆ ಕಾಮಗಾರಿ ಆರಂಭದಲ್ಲಿ ಕುರುಚಲು ಕಾಡುಗಳನ್ನು ತೆರವುಗೊಳಿಸಿ, ಮಂಟಪವನ್ನು ಮತ್ತೆ ನೂತನವಾಗಿ ಆಕರ್ಷಣೆ ಪಡೆದಿದೆ.
ಆದರೆ, ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಇನ್ನು ವೀಕ್ಷಣೆಗೆ ಅಧಿಕೃತವಾಗಿ ಚಾಲನೆ ನೀಡಿಲ್ಲ.

ಹೊಸ ರೂಪದಲ್ಲಿ ಮಂಟಪ:ನೂತನ ಮಂಟಪದ ಸುತ್ತ ಗ್ಲಾಸ್ ಅಳವಡಿಸಲಾಗಿದೆ. ಹೊಸ ಹೆಂಚು, ಗ್ರಾನೈಟ್ ಬೆಂಚ್‌ಗಳನ್ನು ಅಳವಡಿಸಲಾಗಿದೆ, ಬಣ್ಣದ ಲೈಟ್‌, ಆಕರ್ಷಕ ಮುಖ್ಯದ್ವಾರ, ಮೆಟ್ಟಿಲುಗಳ ದುರಸ್ತಿ ಕಾರ್ಯವೂ ಮುಗಿದಿದೆ. ಇನ್ನು ಸುತ್ತ ಸುರಕ್ಷತೆಯ ದೃಷ್ಟಿಯಿಂದ ತಂತಿ ನೆಟ್‌ಗಳನ್ನು ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.