ADVERTISEMENT

ಮಡಿಕೇರಿ: 125 ಬೀದಿನಾಯಿಗಳ ಸ್ಥಳಾಂತರಕ್ಕೆ ನಿರ್ಧಾರ

ಆಹಾರ ನೀಡಲು ಸ್ಥಳ ನಿಗದಿ, ಆಶ್ರಯ ತಾಣ ನಿರ್ಮಿಸಲು ಟೆಂಡರ್‌

ಕೆ.ಎಸ್.ಗಿರೀಶ್
Published 8 ಜನವರಿ 2026, 4:20 IST
Last Updated 8 ಜನವರಿ 2026, 4:20 IST
<div class="paragraphs"><p>ಮಡಿಕೇರಿ ನಗರದ ಮುತ್ತಪ್ಪ ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕುವ ಸ್ಥಳವನ್ನು ನಿಗದಿಪಡಿಸಿ ನಗರಸಭೆಯು ಫಲಕ ಹಾಕಿದೆ</p></div>

ಮಡಿಕೇರಿ ನಗರದ ಮುತ್ತಪ್ಪ ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕುವ ಸ್ಥಳವನ್ನು ನಿಗದಿಪಡಿಸಿ ನಗರಸಭೆಯು ಫಲಕ ಹಾಕಿದೆ

   

ಮಡಿಕೇರಿ: ನಗರದಲ್ಲಿ ಸ್ಥಳಾಂತರ ಮಾಡಲು 125 ಬೀದಿನಾಯಿಗಳನ್ನು ಇಲ್ಲಿನ ನಗರಸಭೆ ಗುರುತಿಸಿದೆ. ಅದಕ್ಕಾಗಿ ನಗರದ ಹೊರವಲಯದಲ್ಲಿ 2 ಎಕರೆ ಪ್ರದೇಶದಲ್ಲಿ ಆಶ್ರಯ ತಾಣ ನಿರ್ಮಿಸಲು ಟೆಂಡರ್ ಸಹ ಕರೆದಿದೆ. ಕೆಲವೇ ದಿನಗಳಲ್ಲಿ ಈ ನಾಯಿಗಳನ್ನು ಆಶ್ರಯ ತಾಣಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.

ನಗರದಲ್ಲಿ ಒಟ್ಟು 1,273 ಬೀದಿನಾಯಿಗಳಿವೆ ಎಂದು ಅಂದಾಜು ಮಾಡಲಾಗಿದೆ.  ಅವುಗಳಲ್ಲಿ 483 ಗಂಡು, 405 ಹೆಣ್ಣು ಉಳಿದ 385 ಮರಿಗಳಿವೆ. ಸ್ಥಳಾಂತರಕ್ಕೆ ಈ ಪೈಕಿ 125 ಬೀದಿನಾಯಿಗಳನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಸುಪ್ರೀಂಕೋರ್ಟ್ ಸೂಚನೆಯನ್ವಯ ಶಾಲೆ, ಕಾಲೇಜುಗಳು, ಆಸ್ಪತ್ರೆಗಳು, ಬಸ್‌ ನಿಲ್ದಾಣ ಹಾಗೂ ಕ್ರೀಡಾ ಸಂಕೀರ್ಣದಲ್ಲಿರುವ 125 ಬೀದಿನಾಯಿಗಳನ್ನು ಗುರುತಿಸಲಾಗಿದೆ. ಅದರನ್ವಯ ಈ ನಾಯಿಗಳನ್ನಷ್ಟೇ ಆಶ್ರಯತಾಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನುಳಿದ ನಾಯಿಗಳು ಎಲ್ಲೆಲ್ಲಿ ಇವೆಯೋ ಅಲ್ಲಲ್ಲೇ ಇರಲಿವೆ.

ಆಶ್ರಯತಾಣ ಎಲ್ಲಿ?

ನಗರದ ಹೊರವಲಯದ ಸ್ಟುವರ್ಟ್‌ ಹಿಲ್‌ ಸಮೀಪ ನಗರದ ಕಸ ಹಾಕುವ ಜಾಗಕ್ಕಿಂತ ಇನ್ನೂ ಮುಂದೆ 2 ಎಕರೆ ಪ್ರದೇಶವನ್ನು   ಬೀದಿನಾಯಿಗಳ ಆಶ್ರಯತಾಣ ನಿರ್ಮಿಸಲು ಗುರುತಿಸಲಾಗಿದೆ. ಇಲ್ಲಿ ₹ 7.97 ಲಕ್ಷ ವೆಚ್ಚದಲ್ಲಿ ಎಲ್ಲ ಬಗೆಯ ಸೌಲಭ್ಯಗಳಿರುವ ಆಶ್ರಯತಾಣ ಸದ್ಯದಲ್ಲೆ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗ ಟೆಂಡರ್ ಸಹ ಕರೆಯಲಾಗಿದೆ. ಇವೆಲ್ಲವೂ ಸುಪ್ರೀಂಕೋರ್ಟ್‌ ಸೂಚನೆಯಂತೆಯೇ ಮಾಡಲಾಗಿದೆ ಎಂದು ನಗರಸಭೆಯ ಮೂಲಗಳು ತಿಳಿಸಿವೆ.

ಬೀದಿನಾಯಿಗಳಿಗೆ ಆಹಾರ ನೀಡಲು 7 ಸ್ಥಳಗಳನ್ನು ಹಾಗೂ ಆಶ್ರಯ ತಾಣ ನಿರ್ಮಿಸಲು 2 ಎಕರೆ ಜಾಗವನ್ನು ಗುರುತಿಸಲಾಗಿದೆ
ಎಚ್.ಆರ್.ರಮೇಶ್, ಮಡಿಕೇರಿ ನಗರಸಭೆ ಪೌರಾಯುಕ್ತ

ನಗರದಲ್ಲಿ 7 ಕಡೆ ಬೀದಿನಾಯಿಗಳಿಗೆ ಆಹಾರ ನೀಡಲು ಅವಕಾಶ

ಸುಪ್ರೀಂಕೋರ್ಟ್‌ ಸೂಚನೆಯಂತೆ ನಗರಸಭೆಯು ನಗರದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಲು ಕೆಲವೊಂದು ಸ್ಥಳಗಳನ್ನು ಗುರುತಿಸಿದೆ. ಈಗಾಗಲೆ ರಾಣಿಪೇಟೆ, ದಾಸವಾಳ, ಮಾರುಕಟ್ಟೆ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಈ ಸಂಬಂಧ ಫಲಕಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕಡೆಯೂ ಇಂದು ಅಥವಾ ನಾಳೆ ಫಲಕಗಳನ್ನು ಅಳವಡಿಸಲಾಗುವುದು ಎಂದು ನಗರಸಭೆಯ ಮೂಲಗಳು ತಿಳಿಸಿವೆ.

ಇಲ್ಲಿ ಪ್ರಾಣಿಪ್ರಿಯರು ಬೀದಿನಾಯಿಗಳಿಗಾಗಿ ಆಹಾರವನ್ನು ಹಾಕಬಹುದು. ಈ ಮೂಲಕ ಹಸಿವೆಯಿಂದ ಬಳಲುವ ಬೀದಿನಾಯಿಗಳಿಗೆ ನೆರವಾಗಬಹುದು.

5ನೇ ಬಾರಿ ಟೆಂಡರ್; ಅರ್ಜಿ ಹಾಕುವವರ ಸುಳಿವೇ ಇಲ್ಲ!

ಮಡಿಕೇರಿ ನಗರದಲ್ಲಿ 2022ರಲ್ಲಿ ಒಟ್ಟು 950 ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಬೀದಿನಾಯಿಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿಲ್ಲ. ಇದರಿಂದ ನಗರದಲ್ಲಿ ಎಲ್ಲೆಂದರಲ್ಲಿ ಬೀದಿನಾಯಿಗಳು ಹೆಚ್ಚಿವೆ. ಮಡಿಕೇರಿ ನಗರದಲ್ಲಿರುವ ಎಲ್ಲ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ರೇಬಿಸ್ ನಿರೋಧಕ ಲಸಿಕೆ ಹಾಕಲು ನಗರಸಭೆಯ 4 ಬಾರಿ ಟೆಂಡರ್‌ ಕರೆದರೂ ಯಾರೊಬ್ಬರೂ ಅರ್ಜಿಯನ್ನೇ ಹಾಕಿಲ್ಲ. ಈಗ 5ನೇ ಬಾರಿ ಟೆಂಡರ್ ಕರೆದಿದೆ. ಒಂದು ಬೀದಿನಾಯಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ₹ 1650 ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡಲು ₹ 250 ಹಣ ನೀಡಲಾಗುತ್ತದೆ. ಆದರೂ ಒಬ್ಬರೂ ಅರ್ಜಿ ಹಾಕಿಲ್ಲ.

ಮಡಿಕೇರಿಯಲ್ಲಿ ಮುತ್ತಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮಧ್ಯೆಯೇ ಬೀದಿನಾಯಿಗಳು ನಿಂತಿರುವುದು
ಮಡಿಕೇರಿಯ ಮಾರುಕಟ್ಟೆಯ ಹಿಂಭಾಗ ಸಾಲಾಗಿ ಬೀದಿನಾಯಿಗಳು ವಿಶ್ರಮಿಸಿಕೊಳ್ಳುತ್ತಿವೆ
ಎಚ್.ಆರ್.ರಮೇಶ್ ನಗರಸಭೆ ಪೌರಾಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.