ಮಡಿಕೇರಿ: ಈ ಶಾಲೆಗೆ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಇಲ್ಲ ಎಂದರೆ ವಿದ್ಯಾರ್ಥಿಗಳೇ ಬರುವುದಿಲ್ಲ. ಇದು ಅತಿಶಯೋಕ್ತಿ ಎನಿಸಿದರೂ ಸತ್ಯ.
ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 150 ವಿದ್ಯಾರ್ಥಿಗಳು ಶಾಲೆಗೆ ಬರಲು ಮತ್ತು ವಾಪಸ್ ತೆರಳಲು ಅವಲಂಬಿಸಿರುವುದು ಸತ್ಯ ಅವರನ್ನೇ. ಶಿಕ್ಷಕ ವೃತ್ತಿಗೆ ನೇಮಕವಾಗಿದ್ದರೂ ಇವರೇ ಸ್ವತಃ ನಿತ್ಯ 45 ಕಿ.ಮೀ ಶಾಲಾ ವಾಹನವನ್ನು ಚಾಲನೆ ಮಾಡಿಕೊಂಡು ಅರಣ್ಯದಂಚಿನಿಂದ ಅರಣ್ಯದ ಒಳಗಿಂದ ಮಕ್ಕಳನ್ನು ಶಾಲೆಗೆ ಕರೆ ತರುತ್ತಿದ್ದಾರೆ. ಇದಕ್ಕಾಗಿ ಅವರು ಯಾವುದೇ ಹಣವನ್ನು ಪಡೆಯುತ್ತಿಲ್ಲ ಎಂಬುದು ಗಮನಾರ್ಹ.
ಹುಲ್ಲು ಗುಡಿಸಲಿನಲ್ಲಿ 1924ರಲ್ಲಿ ಆರಂಭವಾದ ಶಾಲೆ ಈಗಾಗಲೆ 100 ವಸಂತಗಳನ್ನು ಕಂಡಿದೆ. ಈ ಶಾಲೆಯಲ್ಲಿ ಕಲಿತ ಕೆ.ಜೆ.ಜಾರ್ಜ್ ಅವರು ಇಂದು ಇಂಧನ ಸಚಿವರಾಗಿದ್ದಾರೆ. ಇನ್ನೂ ಅನೇಕ ಮಂದಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹದ್ದೊಂದು ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯ ಇಲ್ಲ. ಹೀಗಾಗಿ, ಇವರು ಸಾರಿಗೆ ಸಂಪರ್ಕ ಇಲ್ಲ ಎಂಬ ಕಾರಣಕ್ಕಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆಯ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರೇ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಾಲೆಗಾಗಿ ಸಂಸ್ಥೆಯೊಂದು ವಾಹನವನ್ನು ದೇಣಿಗೆ ರೂಪದಲ್ಲಿ ನೀಡಿದೆ. ಆದರೆ, ಚಾಲಕರನ್ನು ನೇಮಿಸಿಕೊಳ್ಳಲು ಸರ್ಕಾರಿ ನಿಯಮದಲ್ಲಿ ಅವಕಾಶ ಇಲ್ಲ. ಅವರಿಗೆ ಸಂಬಳ ಕೊಡಲು ಹಣವೂ ಇಲ್ಲ. ಹಾಗಾಗಿ, ಸತ್ಯ ಅವರೇ ಚಾಲಕ ವೃತ್ತಿಯನ್ನೂ ನಿಭಾಯಿಸುತ್ತಿದ್ದಾರೆ. ಒಂದು ವೇಳೆ ಅವರು ಮಕ್ಕಳನ್ನು ಕರೆತರಲಿಲ್ಲ ಎಂದರೆ ಮಕ್ಕಳು ಶಾಲೆಗೆ ಬರುವುದೇ ಇಲ್ಲ. ಇವರು ರಜೆ ಹಾಕಿದ ದಿನ ಇವರೇ ತಮ್ಮ ಸ್ವಂತ ಹಣದಿಂದ ಮತ್ತೊಬ್ಬ ಚಾಲಕರನ್ನು ನಿಯೋಜಿಸುತ್ತಾರೆ. ಹೀಗೆ, ಸದ್ದಿಲ್ಲದೇ ಇವರು ಮಕ್ಕಳ ಸೇವೆ ಮಾಡುತ್ತಿದ್ದಾರೆ.
ಈ ವರ್ಷ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಸಹ ಆರಂಭಗೊಂಡಿದೆ. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಸದ್ಯ, ಇವರು ಧನುಗಾಲ, ಮಾರಿಯಮ್ಮ ಕಾಲೊನಿ, ರುದ್ರಬೀಡು, ಬಾಳಾಜಿ, ಕೋಣನಕಟ್ಟೆ, ಮಾಯಮುಡಿ, ಕಳ್ತೋಡು, ಕಮ್ಮಟೆ, ಮಡಕೆಬೀಡು ಗ್ರಾಮ ಮತ್ತು ಹಾಡಿಗಳಿಂದ ಮಕ್ಕಳನ್ನು ಕರೆ ತರುತ್ತಿದ್ದಾರೆ.
ಹೆಚ್ಚುವರಿಯಾಗಿರುವ ಈ ಚಾಲಕ ಸೇವೆ ಇವರ ವೃತ್ತಿಗೆ ತೊಡಕಾಗಿಲ್ಲ. ಇವರು ನೀಡಿದ ತರಬೇತಿಯಿಂದ ಶಾಲೆಯ ಮಕ್ಕಳ ವಾಲಿಬಾಲ್ ತಂಡ ಈಗಾಗಲೇ ವಲಯ ಮತ್ತು ತಾಲ್ಲೂಕು ಮಟ್ಟದಲ್ಲಿ ಜಯ ಗಳಿಸಿ ಜಿಲ್ಲಾಮಟ್ಟವನ್ನು ತಲುಪಿದೆ. ಕಬಡ್ಡಿ ಮತ್ತು ಅಥ್ಲೆಟಿಕ್ಸ್‌ನಲ್ಲಿ ವಲಯ ಮಟ್ಟದಲ್ಲಿ ಜಯ ಗಳಿಸಿ ತಾಲ್ಲೂಕು ಮಟ್ಟ ತಲುಪಿದೆ. ಪ್ರತಿ ವರ್ಷ ಮಕ್ಕಳು ರಾಜ್ಯಮಟ್ಟವನ್ನು ವಿವಿಧ ಕ್ರೀಡೆಗಳಲ್ಲಿ ಪ್ರತಿನಿಧಿಸುತ್ತಾರೆ.
ನಿತ್ಯ 45 ಕಿ.ಮೀ ಚಾಲನೆ ಹಾಡಿಗಳಿಂದ ಬರುವ ಮಕ್ಕಳು ದೈಹಿಕ ಶಿಕ್ಷಕ ಸತ್ಯ ಅವರ ಸೇವೆಗೆ ಶ್ಲಾಘನೆ
7 ವರ್ಷದಿಂದ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರು ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದು ವಾಪಸ್ ಬಿಡುತ್ತಿದ್ದಾರೆರಾಗಿಣಿ ಸಹ ಶಿಕ್ಷಕಿ.
ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರೇ ಮಕ್ಕಳನ್ನು ವಾಹನದಲ್ಲಿ ಕರೆತರಲಿಲ್ಲ ಎಂದರೆ ಮಕ್ಕಳು ಶಾಲೆಗೆ ಬರುವುದಿಲ್ಲ.ಜಯಮ್ಮ ಮುಖ್ಯ ಶಿಕ್ಷಕಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.