ADVERTISEMENT

ಮಡಿಕೇರಿ: ಐತಿಹಾಸಿಕ ಓಂಕಾರೇಶ್ವರ ದೇಗುಲ ಅಭಿವೃದ್ಧಿಗೆ ಸಚಿವರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:29 IST
Last Updated 22 ಆಗಸ್ಟ್ 2025, 4:29 IST
ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಶಾಸಕ ಡಾ.ಮಂತರ್‌ಗೌಡ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಮತ್ತು ಸದಸ್ಯರು ದೇಗುಲಗಳ ಅಭಿವೃದ್ಧಿ ಕುರಿತು ಮನವಿ ಮಾಡಿದರು
ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ಶಾಸಕ ಡಾ.ಮಂತರ್‌ಗೌಡ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಮತ್ತು ಸದಸ್ಯರು ದೇಗುಲಗಳ ಅಭಿವೃದ್ಧಿ ಕುರಿತು ಮನವಿ ಮಾಡಿದರು   

ಮಡಿಕೇರಿ: ಇಲ್ಲಿನ ಐತಿಹಾಸಿಕ ದೇವಾಲಯಗಳಾದ ಓಂಕಾರೇಶ್ವರ, ಆಂಜನೇಯ ಹಾಗೂ ಕೋಟೆ ಗಣಪತಿ ದೇವಾಲಯಗಳ ಅಭಿವೃದ್ಧಿ ಕುರಿತಾಗಿ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಯಿತು.

ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇಲಾಖೆ ವತಿಯಿಂದ ಈ ವಿಶೇಷ ಸಭೆ ಕರೆಯಲಾಗಿತ್ತು.

ಶಾಸಕ ಡಾ.ಮಂತರ್‌ಗೌಡ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ದೇವಾಲಯಗಳ ಹಿನ್ನೆಲೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಸುಮಾರು ₹ 5 ಕೋಟಿ ವೆಚ್ಚದ ಕಾಮಗಾರಿಗಳ ಬಗ್ಗೆ ವಿಡಿಯೊ ಪ್ರದರ್ಶಿಸಲಾಯಿತು.

ADVERTISEMENT

ದೇವಾಲಯ ಸಮಿತಿಯಿಂದ ಐತಿಹಾಸಿಕ ಹಾಗೂ ಪ್ರಾಚೀನ 3 ದೇವಾಲಯಗಳಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಪ್ರಗತಿ ಕಾರ್ಯಗಳ ಕುರಿತು ಶಾಸಕ ಡಾ.ಮಂತರ್‌ಗೌಡ ಸಚಿವರ ಗಮನಕ್ಕೆ ತಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಈ ಬಗ್ಗೆ ಮಾತನಾಡಿ ಮಡಿಕೇರಿ ಸೇರಿದಂತೆ ಕೊಡಗಿನಲ್ಲಿ ಮಳೆ ಬಂದರೆ ಮಾತ್ರ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ತುಂಬಿ ಸರಕಾರಕ್ಕೆ ಸಹಕಾರಿಯಾಗುತ್ತದೆ. ಇಷ್ಟಾಗಿ, ಮಡಿಕೇರಿಯ ನಾಗರಿಕರು ಕಾವೇರಿ ನೀರು ಬಳಸುತ್ತಿಲ್ಲ ಮಡಿಕೇರಿಗೆ ಕೂಟುಹೊಳೆಯ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಆದರೆ, ಮಳೆಗಾಲದಲ್ಲಿ ಮಾತ್ರ ಇಲ್ಲಿನ ಜನ ತೀವ್ರ ಬವಣೆ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ದೇವಾಲಯಗಳನ್ನು ಯಥಾ ಸ್ವರೂಪದಲ್ಲಿ ನಿರ್ವಹಿಸವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಅಧಿಕ ಅನುದಾನ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರಾದ ವೆಂಕಟೇಶ್ ಅವರು “ನಾವು ಇಲಾಖೆಯಿಂದ ಎಲ್ಲ ಯೋಜನೆಗಳನ್ನೊಳಗೊಂಡು ‘ಮಾಸ್ಟರ್ ಪ್ಲಾನ್’ ಮಾಡಿಸಿ ಹಂತ ಹಂತವಾಗಿ ಈ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಇಲಾಖೆಯ ಉಪ ಕಾರ್ಯದರ್ಶಿ ಎಂ.ಸತ್ಯವತಿ ಅವರೂ ದನಿಗೂಡಿಸಿದರು.

ಆದರೆ, ಈ ಕುರಿತು ಸಚಿವ ರಾಮಲಿಂಗೇಗೌಡ ಪ್ರತಿಕ್ರಿಯಿಸಿ, ‘ಶಾಸಕ ಮಂತರ್ ಗೌಡ ಅವರು ಪ್ರಯತ್ನಿಸಿದರೆ ಮುಖ್ಯಮಂತ್ರಿ ಅವರ ನಿಧಿ ಹಾಗೂ ಶಾಸಕ ಶಿವರಾಜ್ ತಂಗಡಗಿ ಅವರ ಶಾಸಕರ ನಿಧಿಯಿಂದಲೂ ನೆರವು ಪಡೆಯಿರಿ’ ಎಂದು ಸಲಹೆ ನೀಡಿದರು. “

ಓಂಕಾರೇಶ್ವರ ದೇವಾಲಯದ ಜಾಗವೊಂದು ಈ ಹಿಂದೆ ಅತಿಕ್ರಮಣವಾಗಿದ್ದು ಈಗ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಕುರಿತು ಸಮಿತಿ ಸದಸ್ಯರಾದ ವಕೀಲ ಎಂ ಎ. ನಿರಂಜನ್ ಸಭೆಯಲ್ಲಿ ಮಾಹಿತಿಯಿತ್ತರು. ಇದನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವ ರಾಮಲಿಂಗೇಗೌಡ ಭರವಸೆ ನೀಡಿದರು.

ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಕೆಂಪೇಗೌಡ ವ್ಯವಸ್ಥಾಪನಾ ಸಮಿತಿಯ ಇನ್ನಿತರ ಸದಸ್ಯರಾದ ಸಂತೋಷ್ ಭಟ್, ಎ. ಕುಶಾಲಪ್ಪ, ಪ್ರಕಾಶ್ ಆಚಾರ್ಯ, ಜಿ.ರಾಜೇಂದ್ರ, ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್, ಉದ್ಯಮಿ ನವೀನ್ ಕುಶಾಲಪ್ಪ ಭಾಗವಹಿಸಿದ್ದರು.

ಶಾಸಕ ಡಾ.ಮಂತರ್‌ಗೌಡ ಭರವಸೆ
ಸಭೆಯ ಬಳಿಕ ಸಮಿತಿಯವರೊಂದಿಗೆ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ ‘ಸದ್ಯದಲ್ಲಿಯೇ ನನ್ನ ಶಾಸಕ ನಿಧಿಯಿಂದಲೂ ಸೇರಿದಂತೆ ಮತ್ತಿತರ ಮೂಲಗಳಿಂದ ಹಣ ಒದಗಿಸಿ ಪ್ರಾರಂಭಿಕವಾಗಿ ಅಗತ್ಯವಾಗಿರುವ ₹ 1.50 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣವನ್ನು ಕೈಗೆತ್ತಿಕೊಳ್ಳೋಣ. ನಾನೆಂದಿಗೂ ಈ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗಿದ್ದೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.