
ಮಡಿಕೇರಿ: ಹುಟ್ಟಿನಿಂದಲೆ ಬರುವ ಶ್ರವಣದೋಷವುಳ್ಳ ಮಕ್ಕಳಿಗೆ 2 ವರ್ಷದ ಒಳಗೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಮುಖ್ಯವಾಹಿನಿ ತರಬಹುದು. ಅದಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹಾಗಾಗಿ, ಶ್ರವಣದೋಷವನ್ನು ಆದಷ್ಟು ಬೇಗನೇ ಪತ್ತೆ ಹಚ್ಚುವುದು ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ವತಿಯಿಂದ ‘ವಿಶ್ವ ಶ್ರವಣ ದಿನ’ದ ಪ್ರಯುಕ್ತ ಮಂಗಳವಾರ ಇಲ್ಲಿನ ರಾಜಾಸೀಟು ಉದ್ಯಾನ ಆವರಣದಲ್ಲಿ ನಡೆದ ಶ್ರವಣದ ಮಹತ್ವ ಕುರಿತ ಬೀದಿನಾಟಕ, ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಒಂದು ಮಗುವಿಗೆ ಶಸ್ತ್ರಚಿಕಿತ್ಸೆಯಾಗಿದೆ. ಮತ್ತೊಂದು ಮಗುವನ್ನು ಗುರುತಿಸಲಾಗಿದೆ. ಹಾಗಾಗಿ, ಮಕ್ಕಳಿಗೆ ಶ್ರವಣಶಕ್ತಿ ದೋಷ ಕಂಡು ಬಂದರೆ ಮುಂದೆ ಸರಿ ಹೋಗಬಹುದು ಎಂದು ಕಾಯದೇ ಕೂಡಲೇ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎ.ಜೆ.ಲೋಕೇಶ್, ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಎಲ್ಲ ಮಕ್ಕಳಿಗೂ ಶ್ರವಣಶಕ್ತಿ ಪರೀಕ್ಷೆ ನಡೆಸಲಾಗುತ್ತಿದೆ’ ಎಂದರು.
ಕಿವಿ ಸಂಬಂಧಿತ ತೊಂದರೆಗಳಿಗೆ ಶೀಘ್ರ ಚಿಕಿತ್ಸೆ ಪಡೆಯುವ ಅಗತ್ಯತೆ ಹಾಗೂ ಹೆಚ್ಚು ಶಬ್ದದ ಮಟ್ಟದಲ್ಲಿ ‘ಇಯರ್ ಫೋನ್’ ಬಳಕೆಯನ್ನು ತಪ್ಪಿಸುವ ಕುರಿತು ಸಲಹೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ‘ತಿಳಿದವರೇ ತಪ್ಪು ಮಾಡುತ್ತಿದ್ದಾರೆ. ಹುಟ್ಟಿದ ಎಲ್ಲಾ ಮಕ್ಕಳಿಗೂ ಶ್ರವಣ ಪರೀಕ್ಷೆ ಮಾಡಬೇಕು. ಶ್ರವಣ ದೋಷ ಉಂಟಾದಲ್ಲಿ ಇಡೀ ಕುಟುಂಬವೇ ಪರಿತಪಿಸಬೇಕಾಗುತ್ತದೆ. ಇದರಿಂದ ಸಮಾಜಕ್ಕೂ ನಷ್ಟ, ಆದ್ದರಿಂದ ಶ್ರವಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದರು.
ಬೀದಿನಾಟಕದ ಮೂಲಕ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಜಾಗೃತಿ ಜಾಥಾವು ರಾಜಾಸೀಟು ರಸ್ತೆ ಮೂಲಕ ನಗರದ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ತಲುಪಿತು.
ಜಾಗೃತಿ ಅಭಿಯಾನದ ಭಾಗವಾಗಿ ಆಯೋಜಿಸಲಾದ ಪೋಸ್ಟರ್ ಹಾಗೂ ಮೀಮ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶ್ರವಣ ಶಕ್ತಿ ದೋಷ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಸನತ್ ಕುಮಾರ್, ಡಾ.ಸಾತ್ಯಕಿ, ಡಾ.ನಳಿನ, ಡಾ.ಶರತ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಡಾ.ಮೆರಿನ್ ಭಾಗವಹಿಸಿದ್ದರು.
‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕ ನಗರದಲ್ಲಿ ನಡೆಯಿತು ಜಾಗೃತಿ ಜಾಥಾ ಕಿವಿ ಬಲು ಜೋಪಾನ ಎಂದ ವಿದ್ಯಾರ್ಥಿಗಳು
ಪ್ರತಿಯೊಬ್ಬರ ಸಮೂಹ ಸಂವಹನಕ್ಕೆ ಶ್ರವಣ ಅತೀ ಮುಖ್ಯ ಅಂಗವಾಗಿದೆ. ಆದ್ದರಿಂದ ಈ ಬಗ್ಗೆ ಉದಾಸೀನ ಮಾಡದೆ ತಜ್ಞ ವೈದ್ಯರಿಂದ ಪರೀಕ್ಷಿಸಿ ಕೊಳ್ಳಬೇಕುಡಾ.ಅಭಿನಂದನ್ ಸ್ಥಾನಿಕ ವೈದ್ಯಾಧಿಕಾರಿ.
ಶ್ರವಣ ಆರೋಗ್ಯವು ಸಮಗ್ರ ಆರೋಗ್ಯದ ಅವಿಭಾಜ್ಯ ಅಂಗವಾಗಿದ್ದು ಶ್ರವಣ ದೋಷ ಉಂಟಾದ ಕೂಡಲೇ ಶೀಘ್ರ ತಪಾಸಣೆಗೆ ಒಳಗಾಗಬೇಕುಡಾ.ಶ್ವೇತಾ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥೆ.
‘ಕಿವಿ ಕೇವಲ ಇಂದ್ರಿಯವಲ್ಲ ಮಗುವಿನ ಭವಿಷ್ಯದ ಬಾಗಿಲು’
‘ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಪೂಜಾ ಮಾತನಾಡಿ ‘ಕಿವಿ ಕೇವಲ ಒಂದು ಇಂದ್ರಿಯವಲ್ಲ ಅದು ಮಗುವಿನ ಭವಿಷ್ಯದ ಬಾಗಿಲು’ ಎಂದರು. ಮಗು ಸ್ಪಷ್ಟವಾಗಿ ಕೇಳಿಸಿಕೊಂಡಾಗ ಅದು ಆತ್ಮವಿಶ್ವಾಸದಿಂದ ಮಾತನಾಡುತ್ತದೆ. ಸ್ಪಷ್ಟವಾಗಿ ಕಲಿಯುತ್ತದೆ. ಹಾಗೆಯೇ ಸ್ವಪ್ನಗಳನ್ನು ದೊಡ್ಡದಾಗಿ ಕಾಣುತ್ತದೆ ಎಂದು ಹೇಳಿದರು. ಸಮುದಾಯದಿಂದ ಶಾಲೆವರೆಗೆ ಆಸ್ಪತ್ರೆಯಿಂದ ಮನೆವರೆಗೆ ಎಲ್ಲರೂ ಒಂದೇ ಸರಪಳಿಯ ಕೊಂಡಿಗಳು. ಆ ಸರಪಳಿಯಲ್ಲಿ ಒಂದು ಕೊಂಡಿ ದುರ್ಬಲವಾದರೂ ಮಗುವಿನ ಭವಿಷ್ಯ ಹಿನ್ನೆಡೆಯಾಗಬಹುದು. ಆದ್ದರಿಂದ ಶ್ರವಣ ಬಗ್ಗೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.