ADVERTISEMENT

ಕೊಡಗಿನಲ್ಲಿ ಜಾಗರಣೆ, ಶಿವನಾಮ ಸ್ಮರಣೆ, ಆರಾಧನೆ

ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಅಪಾರ ಭಕ್ತರಿಂದ ದೇಗುಲ ಭೇಟಿ, ಶಿವಭಕ್ತಿಯಲ್ಲಿ ಮಿಂದೆದ್ದ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 13:18 IST
Last Updated 26 ಫೆಬ್ರುವರಿ 2025, 13:18 IST
ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರು ಬುಧವಾರ ಸಾಲುಗಟ್ಟಿ ನಿಂತು ದೇವರ ಮೂರ್ತಿಯ ದರ್ಶನ ಪಡೆದರು   ಚಿತ್ರ:ರಂಗಸ್ವಾಮಿ
ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರು ಬುಧವಾರ ಸಾಲುಗಟ್ಟಿ ನಿಂತು ದೇವರ ಮೂರ್ತಿಯ ದರ್ಶನ ಪಡೆದರು   ಚಿತ್ರ:ರಂಗಸ್ವಾಮಿ   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಬುಧವಾರ ಎಲ್ಲೆಡೆ ಶಿವನಾಮ ಸ್ಮರಣೆ ನಡೆಯಿತು. ದೇಗುಲಗಳಲ್ಲಿ ವಿಶೇಷ ಆರಾಧನೆಗಳು, ಪೂಜೆ ಪುನಸ್ಕಾರಗಳು ದಿನವಿಡೀ ನಡೆದವು. ಹಲವೆಡೆ ರಾತ್ರಿ ಇಡೀ ಜಾಗರಣೆಗಳು ನಡೆದು, ಅಪಾರ ಜನಸ್ತೋಮ ಶಿವಭಕ್ತಿಯಲ್ಲಿ ಮಿಂದೆದ್ದಿತು.

ನಗರದ ಸುಪ್ರಸಿದ್ಧ ಶಿವಭಕ್ತಿ ಕೇಂದ್ರ ಓಂಕಾರೇಶ್ವರ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ರುದ್ರಹೋಮ, ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿ ಕಣ್ತುಂಬಿಕೊಂಡರು. ರಾತ್ರಿ ಪೂರ್ತಿ ದೇಗುಲದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದೀಪಾಲಂಕಾರದ ಬೆಳಕಿನಲ್ಲಿ ದೇಗುಲ ಕಣ್ಮನ ಸೆಳೆಯಿತು.

ಮತ್ತೊಂದು ಪ್ರಮುಖ ಕ್ಷೇತ್ರ ಎನಿಸಿದ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿರುವ ಬೃಹತ್ ಶಿವನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ದೇಗುಲಕ್ಕೆ ಆಗಮಿಸಿದರು. ದಿನವಿಡೀ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನೆರವೇರಿದರೆ, ರಾತ್ರಿ ದೀಪೋತ್ಸವ ನಡೆದು, ಇಡೀ ದೇಗುಲವೇ ದೀಪದ ಬೆಳಕಿನಲ್ಲಿ ಸೂಜಿಗಲ್ಲಿನಂತೆ ಸೆಳೆಯಿತು.

ADVERTISEMENT

ಇನ್ನು ಮಹದೇವಪೇಟೆಯಲ್ಲಿರುವ ಬಸವೇಶ್ವರ ದೇಗುಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜನರು ಸೇರಿದ್ದರು. ಕನ್ಯಕಾಪರಮೇಶ್ವರಿ ದೇಗುಲದಲ್ಲಿರುವ ನಗರೇಶ್ವರ ಸ್ವಾಮಿ ಮೂರ್ತಿಗೆ ಕ್ಷೀರ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳು ನಡೆದವು. ಜೊತೆಗೆ, ರುದ್ರ ಪಾರಾಯಣವು ಜರುಗಿತು.

ಇಲ್ಲಿನ ದಾಸವಾಳ ಬಡಾವಣೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಸೇರಿದ್ದರು. ವಿವಿಧ ವಿಶೇಷ ಪೂಜಾ ಕೈಂಕರ್ಯಗಳ ನಂತರ ಮಧ್ಯಾಹ್ನ ಅನ್ನದಾನ ನಡೆಯಿತು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ‘ಲೈಟ್‌ ಹೌಸ್‌’ನಲ್ಲಿ ಧ್ಯಾನ ಮೊದಲಾದ ವಿಶೇಷ ಕಾರ್ಯಕ್ರಮಗಳು ಬೆಳಿಗ್ಗೆ ಮತ್ತು ಸಂಜೆ ನಡೆದವು. ನೂರಾರು ಮಂದಿ ಭಾಗವಹಿಸಿದ್ದರು.

ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇಗುಲಕ್ಕೆ ಬುಧವಾರ ಶಿವರಾತ್ರಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು  ಚಿತ್ರ:ರಂಗಸ್ವಾಮಿ
ಮಡಿಕೇರಿಯ ಮಹದೇವಪೇಟೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ಬುಧವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ರುದ್ರಪಾರಾಯಣ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.