ADVERTISEMENT

ಮಹಿಳಾಮಯವಾದ ಮಡಿಕೇರಿ ಗಾಂಧಿ ಮೈದಾನ

ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು, ನೂರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 5:00 IST
Last Updated 9 ಅಕ್ಟೋಬರ್ 2024, 5:00 IST
ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ದಸರೆಯಲ್ಲಿ ಬೆಂಗಳೂರಿನ ಹೇಮಾ ವಿನಾಯಕ್ ಪಾಟೀಲ್ ಅವರು ದಾರದಲ್ಲಿ ದುರ್ಗೆಯ ಚಿತ್ರ ರಚಿಸಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ದಸರೆಯಲ್ಲಿ ಬೆಂಗಳೂರಿನ ಹೇಮಾ ವಿನಾಯಕ್ ಪಾಟೀಲ್ ಅವರು ದಾರದಲ್ಲಿ ದುರ್ಗೆಯ ಚಿತ್ರ ರಚಿಸಿದರು   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ಎತ್ತ ನೋಡಿದರತ್ತ ಮಹಿಳೆಯರೇ ಕಂಡು ಬಂದರು. ವೇದಿಕೆಯ ಮೇಲೆ ಮಾತ್ರವಲ್ಲ ಪ್ರೇಕ್ಷಕರ ಸಾಲಿನಲ್ಲೂ ಮಹಿಳಾ ಪಾರಮ್ಯವೇ ಮೆರೆದಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ನಗರ ದಸರಾ ಸಮಿತಿಯಿಂದ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ‘ಮಹಿಳಾ ದಸರಾ’ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು. ಮಹಿಳಾ ದಸರೆಗೆ ದಿವ್ಯ ಮಂತರ್ ಗೌಡ ಚಾಲನೆ ನೀಡಿದರು. 

ಬೆಂಗಳೂರಿನ ಹೇಮಾ ವಿನಾಯಕ್ ಪಾಟೀಲ ಅವರು ದಾರದಲ್ಲಿ ದುರ್ಗೆ ಚಿತ್ರ ರಚನೆ ಮಾಡುವ ಮೂಲಕ ಕಾರ್ಯಕ್ರಮದ ಕೇಂದ್ರ ಬಿಂದು ಎನಿಸಿದರು.

ADVERTISEMENT

ಮೊದಲಿಗೆ ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ವೇದಿಕೆಯ ಮೇಲೆ ಮಹಿಳೆಯರು ಬರುವ ಮೂಲಕ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಗೆ ಚಾಲನೆ ನೀಡಲಾಯಿತು. ವೈವಿಧ್ಯಮಯವಾದ ದಿರಿಸುಗಳನ್ನು ತೊಟ್ಟ ಮಹಿಳೆಯರು ರ‍್ಯಾಂಪ್ ಮಾಡುವ ಪ‍್ರೇಕ್ಷಕರ ಕರತಾಡನಕ್ಕೆ ಕಾರಣರಾದರು.

ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಮೆಹಂದಿ ಹಾಕುವ ಸ್ಪರ್ಧೆ, ಕೇಶವಿನ್ಯಾಸ ಸ್ಪರ್ಧೆ, ಕಪ್ಪೆ ಜಿಗಿತ, ಒಂಟಿ ಕಾಲಿನ ಓಟ, ಸೀರೆಗೆ ನಿಖರ ಬೆಲೆ ಹೇಳುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್‌ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್‌ ದ ಸಿಟಿಯಂತಹ ಸ್ಪರ್ಧೆಗಳು ಮಾತ್ರವಲ್ಲ ಗಾರ್ಭ ನೃತ್ಯ ಹಾಗೂ ವಾಲಗ ನೃತ್ಯಗಳು ಸೂಜಿಗಲ್ಲಿನಂತೆ ಸೆಳೆದವು.

ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ, ‘ಪಟ್ಟಣ, ನಗರ ಮತ್ತು ಬೃಹತ್ ನಗರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಅವಕಾಶಗಳು ಒದಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ‘ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ 50ರಷ್ಟು ಮೀಸಲು ಶೀಘ್ರ ಜಾರಿಯಾಗಬೇಕು’ ಎಂದು ಒತ್ತಾಯಿಸಿದರು.

ಈ ಹಿಂದೆ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿತು ಎಂಬುದನ್ನು ಮರೆಯಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸಂಕುಚಿತ ಮನೋಭಾವ ಹೊಂದಿದ್ದು, ಇದನ್ನು ಬಿಡಬೇಕು. ಎಲ್ಲರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ‘ದುರ್ಗೆ, ಚಾಮುಂಡಿ, ಹೆಸರಿನಲ್ಲಿ ದಸರಾವನ್ನು ಆಚರಿಸುವುದು ವಿಶೇಷವಾಗಿದೆ’ ಎಂದು ಹೇಳಿದರು.

ಮಹಿಳೆಯರು ಎಲ್ಲಾ ರಂಗಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ತ್ರೀ ಎಂದರೆ ಆತ್ಮಶಕ್ತಿ, ಆದಿಶಕ್ತಿ ಎಂಬುದನ್ನು ಮರೆಯುವಂತಿಲ್ಲ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು, ಮಹಿಳಾ ದಸರಾ ಸಂಚಾಲಕರಾದ ಕುಡೆಕಲ್ ಸವಿತಾ ಸಂತೋಷ್, ನಗರಸಭಾ ಸದಸ್ಯರು, ಎಚ್.ಟಿ.ಅನಿಲ್ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ದಸರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ದಸರೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿದರು
ಮಹಿಳಾ ದಸರೆ ನಡೆಯುತ್ತಿದ್ದ ಮಡಿಕೇರಿಯ ಗಾಂಧಿ ಮೈದಾನಕ್ಕೆ ಸಂಪೂರ್ಣ ಮಹಿಳಾ ಪೊಲೀಸರನ್ನೇ ರಕ್ಷಣೆಗಾಗಿ ನಿಯೋಜಿಸಲಾಗಿತ್ತು

ಹಲವು ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗಿ ಸೂಜಿಗಲ್ಲಿನಂತೆ ಹಲವು ಸ್ಪರ್ಧೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ಮಹಿಳೆಯರು

ಮಹಿಳಾ ಪೊಲೀಸರಿಂದಲೇ ಭದ್ರತೆ ಈ ಬಾರಿ ಮಹಿಳೆ ದಸರೆಗೆ ಮಹಿಳಾ ಪೊಲೀಸರೇ ಸಂಪೂರ್ಣ ಭದ್ರತೆ ಒದಗಿಸಿದ್ದು ವಿಶೇಷವಾಗಿತ್ತು. 24ಕ್ಕೂ ಅಧಿಕ ಮಹಿಳಾ ಪೊಲೀಸರನ್ನೇ ವಿಐಪಿ ದ್ವಾರ ವಾಹನ ನಿಲುಗಡೆ ಗಾಂಧಿ ಮೈದಾನದ ಗೇಟ್ ಸಾರ್ವಜನಿಕರು ಕೂರುವ ಸ್ಥಳ ಸೇರಿದಂತೆ ಅನೇಕ ಕಡೆ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.