ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಮಡಿಕೇರಿ: ವಿದ್ಯುತ್ ಬಿಲ್ ಹೆಚ್ಚು ನೀಡಿದ್ದಾರೆ ಎಂದು ಆರೋಪಿಸಿ ಸೆಸ್ಕ್ ಮೀಟರ್ ರೀಡರ್ ಪ್ರಶಾಂತ್ (28) ಎಂಬುವವರಿಗೆ ಚಾಕುವಿನಿಂದ ಇರಿದಿದ್ದ ಸೋಮವಾರಪೇಟೆ ತಾಲ್ಲೂಕಿನ ಎಫ್‌ಎಂಸಿ ಬಡಾವಣೆಯ ನಿವಾಸಿ ಎಂ.ರತೀಶ್ (40) ಎಂಬಾತನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ರಶಾಂತ್ ಅವರು 2023ರ ಜುಲೈ 13ರಂದು ರತೀಶ್ ಮನೆಗೆ ₹ 1,482 ಬಿಲ್ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರತೀಶ್ ರಸ್ತೆಯಲ್ಲಿ ಚಾಕುವಿನಿಂದ ಇರಿದಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಶಾಂತ್ ಅಲ್ಲೇ ಕುಸಿದುಬಿದ್ದರು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಅವರು ಚೇತರಿಸಿಕೊಂಡರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಸೋಮವಾರಪೇಟೆ ವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ತನಿಖೆ ನಡೆಸಿ ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹ 25,500 ದಂಡ ವಿಧಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಪಿ.ದೇವೇಂದ್ರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.