ADVERTISEMENT

ಬಿಡುಗಡೆಗೊಂಡ ‘ಮನಸ್ಸು’

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ‘ಟಾಪ್‌ 6’ ಪುಸ್ತಕ ಎಂಬ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:16 IST
Last Updated 8 ನವೆಂಬರ್ 2022, 6:16 IST
ಕೊಡವ ಮಕ್ಕಡ ಕೂಟ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಅವರು ಮಾಳೇಟಿರ ಸೀತಮ್ಮ ವಿವೇಕ್‌ ಅವರ ‘ಮನಸ್ಸು’ ಪುಸ್ತಕವನ್ನು ಬಿಡುಗಡೆ ಮಾಡಿದರು. ಸೀತಮ್ಮ ಅವರ ತಾಯಿ ಕಂಬೀರಂಡ ಮುತ್ತಮ್ಮ, ತಂದೆ ನಿವೃತ್ತ ದೈಹಿಕ ಶಿಕ್ಷಕ ಕಂಬೀರಂಡ ಕಿಟ್ಟು ಕಾಳಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ, ಪುಸ್ತಕದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್‌ ಇದ್ದಾರೆ
ಕೊಡವ ಮಕ್ಕಡ ಕೂಟ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಅವರು ಮಾಳೇಟಿರ ಸೀತಮ್ಮ ವಿವೇಕ್‌ ಅವರ ‘ಮನಸ್ಸು’ ಪುಸ್ತಕವನ್ನು ಬಿಡುಗಡೆ ಮಾಡಿದರು. ಸೀತಮ್ಮ ಅವರ ತಾಯಿ ಕಂಬೀರಂಡ ಮುತ್ತಮ್ಮ, ತಂದೆ ನಿವೃತ್ತ ದೈಹಿಕ ಶಿಕ್ಷಕ ಕಂಬೀರಂಡ ಕಿಟ್ಟು ಕಾಳಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ, ಪುಸ್ತಕದ ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್‌ ಇದ್ದಾರೆ   

ಮಡಿಕೇರಿ: ಲೇಖಕಿ ಮಾಳೇಟಿರ ಸೀತಮ್ಮ ವಿವೇಕ್ ಅವರ ‘ಮನಸ್ಸು’ ಪುಸ್ತಕವು ಉನ್ನತ ಪುಸ್ತಕಗಳ ಪೈಕಿ ಮೊದಲ 6 ಸ್ಥಾನಗಳಲ್ಲಿ ನಿಲ್ಲುವಂತದ್ದು ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನಿಂದ ಪಡೆದಿದೆ.

ಕೊಡವ ಮಕ್ಕಡ ಕೂಟ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಳೇಟಿರ ಸೀತಮ್ಮ ವಿವೇಕ್ ಈ ವಿಷಯ ತಿಳಿಸಿದರು.

‘ಮನಸ್ಸಿನ ಕುರಿತಾದ ವೈಜ್ಞಾನಿಕ ವಿಶ್ಲೇಷಣೆಗಳಿರುವ ಪುಸ್ತಕ ಇದಾಗಿದೆ. ಆಧ್ಯಾತ್ಮಿಕತೆಯ ಜತೆಗೆ ವೈಜ್ಞಾನಿಕತೆಯೂ ಇದರಲ್ಲಿದೆ. ಮನಸ್ಸಿನ ಸ್ವರೂಪವನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ’ ಎಂದು ಹೇಳಿದರು.

ADVERTISEMENT

ಉಸಿರಿನ ಮೂಲಕ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮನಸ್ಸಿನ ಕುರಿತು ವಿವಿಧ ಧರ್ಮಗುರುಗಳಿಂದ ಪಡೆದ ಮಾಹಿತಿಗಳೂ ಇಲ್ಲಿವೆ. ಇದೊಂದು ಅಧ್ಯಯನ ಗ್ರಂಥವಾಗಿ ಉಳಿದುಕೊಳ್ಳಬಹುದಾದ ಪುಸ್ತಕ ಎಂದರು.

ಲೇಖಕಿ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ‘ಮಕ್ಕಳು ಮಾತ್ರವಲ್ಲ ದೊಡ್ಡವರ ಕೈಯಲ್ಲೂ ಇದೀಗ ಪುಸ್ತಕ ಕಾಣೆಯಾಗಿ ಮೊಬೈಲ್ ಕುಳಿತಿದೆ. ಲೇಖಕರ ಶ್ರಮ ಸಾರ್ಥಕವಾಗಬೇಕಾದರೆ ಎಲ್ಲರೂ ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಮನಸ್ಸು’ ಪುಸ್ತಕದಲ್ಲಿ ಮನಸ್ಸಿನ ವೈವಿಧ್ಯತೆಯನ್ನು ಕಟ್ಟಿಕೊಡಲಾಗಿದೆ. ತನುವಿಗೂ, ಮನಸ್ಸಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ’ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿದ ಮೂರ್ನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ‘ಕ್ರೀಡಾ ಜಿಲ್ಲೆ ಎನಿಸಿದ ಕೊಡಗಿನಲ್ಲಿ ಸಾಹಿತ್ಯದ ಕೃಷಿ ನಡೆಯುತ್ತಿರುವುದು ಶ್ಲಾಘನೀಯ. ಉತ್ತಮ ಸಮಾಜ ನಿರ್ಮಾಣಕ್ಕೆ ಪುಸ್ತಕಗಳು ಹೆಚ್ಚು ಸಹಕಾರಿಯಾಗಿದೆ’ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಕೊಡವ ಮಕ್ಕಡ ಕೂಟವು ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 59 ಪುಸ್ತಕಗಳನ್ನು ಹೊರ ತಂದು ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದು 60ನೇ ಪುಸ್ತಕವಾಗಿದೆ. ಇದುವರೆಗೂ ಪ್ರಕಟಿಸಿರುವ 59 ಪುಸ್ತಕಗಳಲ್ಲಿ 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದ್ದು, 3 ಪುಸ್ತಕಗಳು ಕೊಡವ ಸಿನಿಮಾವಾಗಿದೆ’ ಎಂದು ಹೇಳಿದರು.

ಲೇಖಕಿ ಸೀತಮ್ಮ ಅವರ ತಂದೆ ನಿವೃತ್ತ ದೈಹಿಕ ಶಿಕ್ಷಕ ಹಾಗೂ ಹಿರಿಯ ಕ್ರೀಡಾ ಸಾಧಕ ಕಂಬೀರಂಡ ಕಿಟ್ಟು ಕಾಳಪ್ಪ, ತಾಯಿ ಕಂಬೀರಂಡ ಮುತ್ತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.