ADVERTISEMENT

ಕೊಡವ ಕೌಟುಂಬಿಕ ಹಾಕಿ: ಬೆಳ್ಳಿ ಹಬ್ಬದ ಕಿರೀಟ ತೊಟ್ಟ ಮಂಡೇಪಂಡ

ಕೊಡವ ಕೌಟುಂಬಿಕ ಹಾಕಿ ಮುದ್ದಂಡ ಕಪ್‌ನ ಅಂತಿಮ ಪಂದ್ಯದಲ್ಲಿ ಮಳೆಯದ್ದೇ ಆಟ!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 2:56 IST
Last Updated 28 ಏಪ್ರಿಲ್ 2025, 2:56 IST
25ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಮಂಡೇಪಂಡ ತಂಡ
25ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಮಂಡೇಪಂಡ ತಂಡ   

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಬೆಳ್ಳಿ ಹಬ್ಬದ ಕಿರೀಟವನ್ನು ಮಂಡೇಪಂಡ ತಂಡ ಭಾನುವಾರ ಅಪಾರ ಸಂಖ್ಯೆಯ ಪ್ರೇಕ್ಷಕರ ಕರತಾಡನದ ಮಧ್ಯೆ ತನ್ನ ಮುಡಿಗೇರಿಸಿಕೊಂಡಿತು. 3 ಬಾರಿಯ ಚಾಂಪಿಯನ್ ಚೇಂದಂಡ 2ನೇ ಸ್ಥಾನ ಪಡೆಯಿತು. ಮುದ್ದಂಡ ಕಪ್‌ನ ಫೈನಲ್‌ ಪಂದ್ಯದ ರೋಚಕ ಹಣಾಹಣಿಯನ್ನು ನೋಡಲೇಂದೇ ಬಂದಿದ್ದ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳ ಆಸೆಗೆ ವರುಣ ತಣ್ಣೀರೆರಚಿದ.

ಇಂತಹದ್ದೊಂದು ಅಪರೂಪದ ದೃಶ್ಯಗಳಿಗೆ ಇಲ್ಲಿನ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನ ಸಾಕ್ಷಿಯಾಯಿತು. ಬೆಳಿಗ್ಗೆಯಿಂದ ಇದ್ದ ಪ್ರಖರ ಬಿಸಿಲಿನಿಂದ ಮಳೆ ಬರುತ್ತದೆ ಎಂಬ ಸಣ್ಣ ಸೂಚನೆ ಆಯೋಜಕರಿಗಾಗಲಿ, ಪ್ರೇಕ್ಷಕರಿಗಾಗಿ ಸಿಕ್ಕಿರಲಿಲ್ಲ. ಆದರೆ, ಮಧ್ಯಾಹ್ನೆ ಸಮೀಪಿಸುತ್ತಿದ್ದಂತೆ ಸುತ್ತಲೂ ಹಸಿರು ಹೊದ್ದ ಬೆಟ್ಟಗಳ ನಡುವಿನಿಂದ ಕಾರ್ಮೋಡಗಳು ತೇಲಿ ಬರಲಾರಂಭಿಸಿದವು. ಹುತ್ತದಂತೆ ಗಗನದಲ್ಲಿ ಬೆಳೆದ ಮೋಡ ಪಂದ್ಯ ಆರಂಭವಾದ ನಂತರ ತನ್ನ ಅಂತಿಮ ಆಟವನ್ನು ಪ್ರದರ್ಶಿಸಲಾರಂಭಿಸಿತು.

ಒಮ್ಮೆ ಪಂದ್ಯ ನಿಂತು ಮೈದಾನದಲ್ಲಿ ನಿಂತಿದ್ದ ನೀರನ್ನು ಬಸಿದು ಮತ್ತೆ ಪಂದ್ಯ ಆರಂಭಿಸಿದರೂ, ರಚ್ಚೆ ಹಿಡಿದ ಮಕ್ಕಳಂತೆ ಮಳೆರಾಯ ಮತ್ತೆ ಬಂದ. ಬಿರುಸಾಗಿ ಸುರಿದು ಮೈದಾನವನ್ನು ಕೆರೆಯಂತಾಗಿಸಿದ. ಮಾತ್ರವಲ್ಲ, ಸಿಡಿಲು, ಗುಡುಗು, ಕೋಲ್ಮಿಂಚುಗಳನ್ನೂ ಜೊತೆಯಲ್ಲಿ ತಂದ. ಹೀಗಾಗಿ, ಪೂರ್ಣ ಆಟದ ಸವಿಯು ಪ್ರೇಕ್ಷಕರಿಗೆ ದಕ್ಕಲಿಲ್ಲ.

ADVERTISEMENT

ಆದರೇನಂತೆ, ಪ್ರೇಕ್ಷಕರ ಖುಷಿಗೆ ಪಾರವೇ ಇರಲಿಲ್ಲ. ಸುರಿಯುತ್ತಿದ್ದ ಮಳೆಯ ನಡುವೆ ಅವರು ವಾಲಗಕ್ಕೆ ಹೆಜ್ಜೆ ಹಾಕಿದರು. ಡ್ರಮ್ ವಾದನಕ್ಕೆ ಕುಣಿದು ಕುಪ್ಪಳಿಸಿದರು. ಮಳೆಯ ಮಧ್ಯೆಯೂ ಪ್ರೇಕ್ಷಕರು ಸಂಭ್ರಮಿಸಿ, ಆನಂದಿಸಿದರು.

ಪಂದ್ಯಾವಳಿಯ ವಿಜೇತ ತಂಡಕ್ಕೆ ₹ 5 ಲಕ್ಷ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹ 3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ ₹ 1 ಲಕ್ಷ ನಗದು ನೀಡಲಾಯಿತು.

ಮಹಿಳಾ ಹಾಕಿ ಪಂದ್ಯಾವಳಿಯ ವಿಜೇತರಿಗೆ ₹ 2ಲಕ್ಷ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹ 1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.

25ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ 2ನೇ ಸ್ಥಾನದ ಪಡೆದ  ಚೇಂದಂಡ ತಂಡ
ತಿಂಗಳ ಕಾಲ ನಡೆದ ಟೂರ್ನಿಗೆ ವಿರಾಮ ಮುಂದಿನ ಟೂರ್ನಿ ನಾಪೋಕ್ಲುವಿನಲ್ಲಿ ಅಂತಿಮ ಪಂದ್ಯಕ್ಕೆ ಅಡಿ ಇಟ್ಟ ವರುಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.