ADVERTISEMENT

ಪ್ರತ್ಯೇಕ ಕೃಷಿ ಬಜೆಟ್‌ ಬೇಕು:ರೈತ ಸಂಘದ ಕಾರ್ಯಕಾರಿಣಿಯಲ್ಲಿ ಸರ್ವಾನುಮತದ ತೀರ್ಮಾನ

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕಾರಿಣಿಯಲ್ಲಿ ಸರ್ವಾನುಮತದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 11:14 IST
Last Updated 23 ಜುಲೈ 2024, 11:14 IST
ರವಿಕಿರಣ್ ಪುಣಚ
ರವಿಕಿರಣ್ ಪುಣಚ   

ಮಡಿಕೇರಿ: ಕೇಂದ್ರ ಸರ್ಕಾರ ಪ್ರತ್ಯೇಕವಾದ ಕೃಷಿ ಬಜೆಟ್‌ನ್ನು ಮಂಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಒತ್ತಾಯಿಸಿದರು.

ಈ ಕುರಿತು ಎನ್‌ಡಿಎ ಒಕ್ಕೂಟದ ಎಲ್ಲ ಪಕ್ಷಗಳಿಗೂ ಪತ್ರ ಬರೆದು ಒಮ್ಮತಾಭಿಪ್ರಾಯ ಮೂಡಿಸಲು ಸಂಘ ಮುಂದಾಗಿದೆ. ಜೊತೆಗೆ, ರೈತಪರವಾದ ಅಂಶಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರ ಅತ್ಮಹತ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳನ್ನೊಳಗೊಂಡ ಪರಿಣತರ ಸಮಿತಿಯನ್ನು ರಚಿಸಬೇಕು. ಜೊತೆಗೆ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತ ಕುಟುಂಬಕ್ಕೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸಬೇಕು. ಡಾ.ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸಂಪೂರ್ಣ ಉತ್ಪನ್ನ ಸಂಗ್ರಹಣೆಯ ಖಾತರಿ ನೀಡಬೇಕು ಎಂದರು.

ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರವೇಶ ನೀಡಕೂಡದು. ಮುಕ್ತ ವ್ಯಾಪಾರ ಒಡಂಬಡಿಕೆಗಳನ್ನು ಮಾಡಿಕೊಳ್ಳಬಾರದು. ವಿಶ್ವ ವಾಣಿಜ್ಯ ಒಪ್ಪಂದದಿಂದ ಕೃಷಿ ಕ್ಷೇತ್ರವನ್ನು ಹೊರಗಿಡಬೇಕು ಎಂದು ಪ್ರತಿಪಾದಿಸಿದರು.

ರಸಗೊಬ್ಬರ, ಬೀಜ, ಕೀಟನಾಶಕ, ಯಂತ್ರೋಪಕರಣಗಳು ಹಾಗೂ ಟ್ರಾಕ್ಟರ್‌ಗಳ ಮೇಲೆ ಜಿಎಸ್‌ಟಿ ಹಾಕಬಾರದು. ಸಬ್ಸಿಡಿ ನೀತಿಯನ್ನು ಮತ್ತೆ ಜಾರಿಗೆ ತರಬೇಕು. 60 ವ‌ರ್ಷ ತುಂಬಿದ ರೈತರಿಗೆ ಮಾಸಿಕ ₹ 10 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ‘ಬಲಿಷ್ಠ ರಾಜ್ಯಗಳು ಬಲಿಷ್ಠ ಭಾರತ ಒಕ್ಕೂಟ’ ಎಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕುಗಳನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಪ‍್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮೈಸೂರು ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಮರಂಕಯ್ಯ ಭಾಗವಹಿಸಿದ್ದರು.

ಮನುಸೋಮಯ್ಯ ಪದಚ್ಯುತಿ; ರವಿಕಿರಣ್ ಪುಣಚ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಅವರನ್ನು ಪದಾಧಿಕಾರ ಸ್ಥಾನದಿಂದ ತೆಗೆದುಹಾಕಲು ಭಾನುವಾರ ಬೆಳಗಾವಿಯ ಯರಗಟ್ಟಿಯಲ್ಲಿ ನಡೆದ ಸಂಘದ ಕಾರ್ಯಕಾರಿಣಿಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದರು. ಸಂಘದ ನೀತಿ ನಿಯಮಗಳಿಗೆ ಚ್ಯುತಿ ತಂದ ಕಾರಣಕ್ಕೆ ತನಿಖೆ ನಡೆಸಲು ಬಂದಿದ್ದ ಶಿಸ್ತು ಸಮಿತಿಗೆ ಸಹಕರಿಸದೇ ಇದ್ದುದಕ್ಕೆ ಮುನುಸೋಮಯ್ಯ ಅವರ ಜೊತೆಗೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ಟುಮಾಡು ಸುಜನ್ ಬೋಪಯ್ಯ ಸಂಚಾಲಕ ಪುಚಿಮಾಡ ಸುಭಾಷ್ ಸುಬ್ಬಯ್ಯ ಕಾರ್ಯದರ್ಶಿ ಅಜ್ಜಮಾಡ ಚೆಂಗಪ್ಪ ಖಜಾಂಚಿ ಇಟೀರ್ ಸಭಿತಾ ಭೀಮಯ್ಯ ಅವರನ್ನೂ ಪದಾಧಿಕಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಸದ್ಯದಲ್ಲೇ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗುವುದು ಎಂದರು.

ಆರೋಪಗಳು ಸತ್ಯಕ್ಕೆ ದೂರ; ಮನುಸೋಮಯ್ಯ ಸಂಘದ ಕಾರ್ಯಕಾರಿಣಿ ತೀರ್ಮಾನ ಕುರಿತು ‘ಪ್ರಜಾವಾಣಿ’ ಮನುಸೋಮಯ್ಯ ಅವರನ್ನು ಸಂಪರ್ಕಿಸಿದಾಗ ಅವರು ‘ಆರೋಪಗಳೆಲ್ಲವೂ ಸತ್ಯಕ್ಕೆ ದೂರ’ ಎಂದು ತಿಳಿಸಿದರು. ‘ಕೆಲವೊಂದು ತೀರ್ಮಾನಗಳನ್ನು ನ್ಯಾಯಯುತವಾಗಿ ಪ್ರಶ್ನಿಸಿದ್ದೇನೆಯೇ ಹೊರತು ಯಾವುದೇ ತಪ್ಪು ಮಾಡಿಲ್ಲ. ಸದ್ಯದಲ್ಲೇ ಜಿಲ್ಲೆಯ ಕಾರ್ಯಕರ್ತರು ಮುಖಂಡರು ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.