
ಆನಂದಪುರದಲ್ಲಿ ಮಣ್ಣಿನಲ್ಲಿ ದೊರೆತ ಚಿನ್ನಾಭರಣವನ್ನು ಹೋಲುವ ಲೋಹ
ಸಿದ್ದಾಪುರ: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದಪುರದಲ್ಲಿ ಈಶ್ವರ ದೇವಾಲಯದ ಕಾಮಗಾರಿ ನಡೆದಾಗ ಚಿನ್ನಾಭರಣ ಹೋಲುವ ವಸ್ತುಗಳು ಪತ್ತೆಯಾಗಿವೆ.
ಆನಂದಪುರದ ಟಾಟಾ ಸಂಸ್ಥೆಯ ಈಶ್ವರ ದೇವಾಲಯದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರಾದ ಸುಬ್ರಮಣಿ ಹಾಗೂ ಇತರರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಿಂದ ಎರಡು ಡಬ್ಬಗಳು ಪತ್ತೆಯಾಗಿವೆ. ಕಾರ್ಮಿಕರು ಕೂಡಲೇ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಎರಡು ಡಬ್ಬಗಳಲ್ಲಿ ಚಿನ್ನಾಭರಣಗಳ ಲೋಹ ಪತ್ತೆಯಾಗಿದೆ. ಅಂದಾಜು 900 ಗ್ರಾಂ ಲೋಹ ಪತ್ತೆಯಾಗಿದ್ದು, ಕಂದಾಯ ಅಧಿಕಾರಿಗಳು ಮಣ್ಣಿನಿಂದ ದೊರೆತ ಲೋಹವನ್ನು ತಾಲ್ಲೂಕು ಖಜಾನೆಗೆ ಕೊಂಡೊಯ್ದರು.
‘ದೊರೆತ ಲೋಹವನ್ನು ಚಿನ್ನ ಎಂಬುದು ಸ್ಪಷ್ಟವಾಗಿಲ್ಲ. ಪುರಾತತ್ವ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗೆ ನೀಡಲಾಗುವುದು’ ಎಂದು ತಾಲ್ಲೂಕು ಉಪ ತಹಶೀಲ್ದಾರ್ ಪ್ರದೀಪ್ ತಿಳಿಸಿದರು.
ಈ ಸಂದರ್ಭ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಓಮಪ್ಪ ಬಣಕಾರ್, ಸಿದ್ದಾಪುರ ಪಿಎಸ್‌ಐ ರಾಘವೇಂದ್ರ, ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಆನಂದಪುರದಲ್ಲಿ ಮಣ್ಣಿನಲ್ಲಿ ದೊರೆತ ಲೋಹವನ್ನು ಕಂದಾಯ ಅಧಿಕಾರಿಗಳು ಶಕ್ಕೆ ಪಡೆದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.