
ಸೋಮವಾರಪೇಟೆ: ‘ಅಮೃತ್-2 ಯೋಜನೆಯಡಿ ಪಟ್ಟಣದ ರಸ್ತೆಗಳನ್ನು ಅಗೆದು ಪೈಪ್‌ಲೈನ್ ಹಾಕಲಾಗಿದೆ. ಸರಿಯಾಗಿ ಗುಂಡಿ ಮುಚ್ಚದೇ ಇರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ’ ಎಂದು ಸಾರ್ವಜನಿಕರು ಶಾಸಕರಲ್ಲಿ ಸಮಸ್ಯೆ ಹೇಳಿಕೊಂಡರು.
ಸಂತೆ ದಿನವಾದ ಸೋಮವಾರ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಮುಂದಿನ ಒಂದು ವಾರದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಎಂಜಿನಿಯರ್‌ಗೆ ಸೂಚಿಸಿದರು.
‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಮಿತಿಮೀರಿದ್ದು, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು.
‘ಪಾರ್ಕಿಂಗ್ ಅವ್ಯವಸ್ಥೆ ಪರಿಪಡಿಸಬೇಕು, ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಸಮಸ್ಯೆ ಬಗೆಹರಿಸಬೇಕು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಟ್ರಾಫಿಕ್ ಕೆಲಸಕ್ಕೆ ನಿಯೋಜಿಸಬೇಕು’ ಎಂದು ಸ್ಥಳದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಮುದ್ದುಮಹದೇವ ಅವರಿಗೆ ಸೂಚಿಸಿದರು.
‘ಪಟ್ಟಣ ಪಂಚಾಯಿತಿ ಮೂಲಕ ₹ 5 ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು. ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ₹80 ಲಕ್ಷ ವೆಚ್ಚದಲ್ಲಿ ಪೇ ಪಾರ್ಕಿಂಗ್ ಕಾಮಗಾರಿ ನಡೆಯಲಿದೆ. ಸಿದ್ಧಲಿಂಗಪುರದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇದು ಪೂರ್ಣಗೊಂಡರೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಆದಾಗ್ಯೂ ಪಟ್ಟಣದಲ್ಲಿ ಕಸಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಹಾಕಬಾರದು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು’ ಎಂದು ಶಾಸಕರು ಸೂಚಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂಖಾನ್, ಎಂಜಿನಿಯರ್ ಕೀರ್ತನ್, ಹೇಮಕುಮಾರ್, ಪ್ರಮುಖರಾದ ಡಿ.ಯು. ಕಿರಣ್, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ವಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.