ಗೋಣಿಕೊಪ್ಪಲು: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 33 ಕೆ.ವಿ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಲಭ್ಯ ಇರುವ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.
ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ಭಾನುವಾರ ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕರಿಗೆ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್ ಅವರು, ಕಳೆದ 20 ದಿನಕ್ಕೂ ಹೆಚ್ಚು ದಿನಗಳಿಂದ ವಿದ್ಯುತ್ ಸಮಸ್ಯೆಯನ್ನು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮದ ಜನರು ಎದುರಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ವಿದ್ಯುತ್ ಕಡಿತ ಹಲವು ವಾರಗಳು ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಅಡಚಣೆ ಉಂಟಾಗುವ ಸ್ಥಳಗಳಿಗೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರಗಳಿಂದ ದೂರವಿರುವ ಪ್ರದೇಶಕ್ಕೆ ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲು ಸರ್ಕಾಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಆದ್ದರಿಂದ ಬಿರುನಾಣಿ ವ್ಯಾಪ್ತಿಗೆ ಉಪ ವಿದ್ಯುತ್ ಸರಬರಾಜು ಕೇಂದ್ರದ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಈ ಬಗ್ಗೆ ಲಭ್ಯವಿರುವ ಜಾಗವನ್ನು ಗ್ರಾಮಸ್ಥರ ಸಲಹೆ ಪಡೆದು ಗುರುತಿಸಿ, ಉಪ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸುವ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಶಾಸಕರ ಕರ್ತವ್ಯ ಅಧಿಕಾರಿ ಬಿ.ಎ.ಮುತ್ತಣ್ಣ ಅವರೊಂದಿಗೆ ಸಂಪರ್ಕದಲ್ಲಿರುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಇದೇ ವೇಳೆ ಬಿರುನಾಣಿಯ ಕಳಕೂರು ಗ್ರಾಮದಲ್ಲಿ ರಸ್ತೆ ಕುಸಿತ ಸೇರಿದಂತೆ ಬರೆ ಕುಸಿತ ಪ್ರದೇಶಗಳನ್ನು ಪೊನ್ನಣ್ಣ ವೀಕ್ಷಿಸಿ, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ತಕ್ಷಣ ತಾತ್ಕಾಲಿಕ ಕಾಮಗಾರಿ ಹಾಗೂ ಮಳೆಗಾಲ ಕಳೆದ ನಂತರ ಹಾನಿಯಾಗಿರುವ ಜಾಗಗಳಿಗೆ ಶಾಶ್ವತ ಕಾಮಗಾರಿ ಕೈಗೊಳ್ಳುವಂತೆಯೂ ಸೂಚಿಸಿದರು. ಇದೇ ವೇಳೆ ಈ ವ್ಯಾಪ್ತಿಯ ಮಳೆ ಹಾನಿಯ ಬಗ್ಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ಮುಖಂಡರಾದ ಕರ್ತಮಾಡ ನಂದಾ, ಕಾಳಿಮಾಡ ರಸಿಕ್, ಬೊಟ್ಟಂಗಡ ಪ್ರತಾಪ್, ಚೋನಿರ ಜೀವನ್, ಅಣ್ಣೀರ ವಿಜು ಪೂಣಚ್ಚ, ಕಾಳಿಮಾಡ ಪ್ರಶಾಂತ್, ಮುಕ್ಕಾಟಿರ ಸಂದೀಪ್, ಪೊನ್ನಂಪೇಟೆ ತಾಲ್ಲೂಕು ತಹಶೀಲ್ದಾರ್ ಮೋಹನ್ ಕುಮಾರ್, ಅಧಿಕಾರಿಗಳಾದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಕುಟ್ಟ ಸಿಪಿಐ ಮಂಜಪ್ಪ, ಶ್ರೀಮಂಗಲ ಸಬ್‌ಇನ್‌ಸ್ಪೆಕ್ಟರ್ ಶಿವಾನಂದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.