ADVERTISEMENT

ವೃದ್ಧೆ ಕೊಲೆ ಪ್ರಕರಣ: ಆರೋಪಿ ಮೆಕ್ಯಾನಿಕಲ್‌ ಎಂಜಿನಿಯರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 2:25 IST
Last Updated 24 ಮಾರ್ಚ್ 2021, 2:25 IST
ಬಂಧಿತ ಆರೋಪಿಯೊಂದಿಗೆ ಕಾರ್ಯಾಚರಣೆ ಪೊಲೀಸ್‌ ತಂಡ
ಬಂಧಿತ ಆರೋಪಿಯೊಂದಿಗೆ ಕಾರ್ಯಾಚರಣೆ ಪೊಲೀಸ್‌ ತಂಡ   

ಮಡಿಕೇರಿ: ನಗರ ಹೊರವಲಯದಲ್ಲಿ ಈಚೆಗೆ ನಡೆದಿದ್ದ ವೃದ್ಧೆ ಕೊಲೆ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಗರದ ಖಾಸಗಿ ರೆಸಾರ್ಟ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಅನಿಲ್ ಬಂಧಿತ ಆರೋಪಿ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದ ಮಹೀಂದ್ರಾ ರೆಸಾರ್ಟ್ ಸಮೀಪ ತನ್ನ ಸ್ವಂತ ಮನೆಯಲ್ಲಿ ವಾಸವಿದ್ದ ವೃದ್ಧೆ ಲಲಿತಾ (70) ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿ ಆರೋಪಿ ಪರಾರಿಯಾಗಿದ್ದ. ಆರೋಪಿ ಬಂಧನಕ್ಕೆ ಎಸ್‌ಪಿ ಅವರು ವಿಶೇಷ ತಂಡ ರಚಿಸಿದ್ದರು.

ADVERTISEMENT

ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಲಲಿತಾ ಅವರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ನಗದನ್ನು ದೋಚಿರುವುದು ದೃಢಪಟ್ಟಿದೆ.

ಬಂಧಿತ ಆರೋಪಿ ಮೆಕಾನಿಕಲ್ ಎಂಜಿನಿಯರ್. ಮೂಡಬಿದಿರೆ ಹಾಗೂ ಮಂಗಳೂರಿನಲ್ಲಿ ಮಾರಾಟ ಮಾಡಿದ್ದ ಅಂದಾಜು ₹ 2.80 ಲಕ್ಷ ಮೌಲ್ಯದ 72 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ₹ 4,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಕಾರ್ಯಾಚರಣೆ ತಂಡದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ಪಿಎಸ್‌ಐ ರವಿಕಿರಣ್, ಡಿಸಿಐಬಿ ಸಿಬ್ಬಂದಿಯಾದ ಯೋಗೇಶ್ ಕುಮಾರ್, ನಿರಂಜನ್, ಶರತ್ ರೈ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ರವಿಕುಮಾರ್, ಮಂಜುನಾಥ್, ದಿನೇಶ್, ಸೋಮಶೇಖರ್ ಸಜ್ಜನ್, ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‌ಐ ತಮ್ಮಯ್ಯ, ಸಿಬ್ಬಂದಿ ಲವಕುಮಾರ್, ಡಿಸಿಐಬಿ ಎಎಸ್‌ಐ ಹಮೀದ್, ಅನಿಲ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶಶಿಕುಮಾರ್, ಹಾಗೂ ಸಿಡಿಆರ್ ಸೆಲ್‌ನ ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.