ADVERTISEMENT

ಕೊಡಗು: ಮಳೆಯ ಸಿಂಚನ; ಅಣಬೆಗಳ ನರ್ತನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 4:58 IST
Last Updated 8 ಜೂನ್ 2023, 4:58 IST
ನಾಪೋಕ್ಲುವಿನಲ್ಲಿ ಸುರಿದ ಮಳೆಗೆ ದಿಢೀರ್ ಹುಟ್ಟಿಕೊಂಡ ಅಣಬೆಗಳ ಸಮೂಹ
ನಾಪೋಕ್ಲುವಿನಲ್ಲಿ ಸುರಿದ ಮಳೆಗೆ ದಿಢೀರ್ ಹುಟ್ಟಿಕೊಂಡ ಅಣಬೆಗಳ ಸಮೂಹ   

ಸಿ.ಎಸ್.ಸುರೇಶ್

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಮುಂಗಾರುಪೂರ್ವ ಮಳೆಗೆ ತೇವಗೊಂಡ ನೆಲದಲ್ಲಿ ಅಣಬೆಗಳ ನರ್ತನ ಶುರುವಾಗಿದೆ. ಇದರೊಂದಿಗೆ ಪ್ರಕೃತಿಗೆ ವಿಶಿಷ್ಟ ಸೌಂದರ್ಯವೂ ಮೇಳೈಸಿದೆ.

ಮಳೆಗಾಲದಲ್ಲಿ ಅರಳುವ ನಾನಾ ನಮೂನೆಯ ಅಣಬೆಗಳು ಮನಸೂರೆಗೊಳ್ಳುತ್ತವೆ. ತೇವದ ನೆಲದಿಂದ ಅಪರೂಪದ ಅಣಬೆಗಳು ಮೂಡಿದರೆ, ಮತ್ತೆ ಮಳೆಗಾಲದಲ್ಲಿ ಕಾಡುಗಳಲ್ಲಿ ಓಡಾಡಿದವರಿಗೆಲ್ಲ ಮತ್ತಷ್ಟು ಚಿತ್ರ, ವಿಚಿತ್ರ ಅಣಬೆಗಳು ಕಾಣಸಿಗುತ್ತವೆ. ದಟ್ಟ ಹಸಿರಿನ ಗಿಡಮರಗಳ ನಡುವೆ, ಒಣಗಿದ ಮರಗಳ ಕಾಂಡಗಳ ಮೇಲೆ ಬಿಳಿ, ಹಳದಿ, ಕಂದು ಬಣ್ಣದ ಅಣಬೆಗಳು ಅರಳಿ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸತೊಡಗುತ್ತವೆ. ಅವು ತಮ್ಮಷ್ಟಕ್ಕೆ ತಾವೇ ನಗುತ್ತಿವೆಯೋ ಏನೋ ಎಂಬಂತೆ ಭಾಸವಾಗುತ್ತವೆ. ಈ ಅಣಬೆಗಳ ನಗು ದೀರ್ಘ ಕಾಲದ್ದಲ್ಲ, ಮಳೆಗಾಲದ ಆರಂಭದಲ್ಲಿ ಕಾಣಸಿಗುವ ಅಣಬೆಗಳ ಸೌಂದರ್ಯವನ್ನು ಆಗಲೇ ಕಣ್ತುಂಬಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೊಂದು ಅವಕಾಶಕ್ಕಾಗಿ ಮುಂದಿನ ಮಳೆಗಾಲದವರೆಗೆ ಕಾಯಬೇಕು. ಈಗ ಕಾಡುಗಳಲ್ಲಿ ಕಾಣಸಿಗುವ ಅಣಬೆಗಳ ಚಿತ್ತಾರ ಲೋಕ ಕಣ್ಮನ ಸೆಳೆಯುತ್ತಿವೆ.

ADVERTISEMENT

ಮಳೆಗಾಲದ ಅಣಬೆಗಳಿಗೆ ಹಲವು ಬಣ್ಣ, ಆಕಾರ ಹಾಗೂ ರೂಪಗಳಿವೆ. ತೇವದ ಮಣ್ಣಿನಲ್ಲಿ ಸಿಗುವ ಅಪರೂಪದ ಅಣಬೆಗಳಲ್ಲಿ ಕೆಲವು ತರಕಾರಿಯಾಗಿ ಬಳಕೆಯಾದರೆ ಮತ್ತೆ ಕೆಲವು ನೋಟಕ್ಕಷ್ಟೇ ಚೆನ್ನ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮಳೆಗಾಲದ ಆರಂಭಕ್ಕೆ ಮೊದಲು ತಿನ್ನುವ ಅಣಬೆಗಳಿಗಾಗಿ ಅತ್ತಿತ್ತ ಕಣ್ಣು ಹಾಯಿಸಿ ಹುಡುಕುತ್ತಾರೆ. ತೇವದ ಮಣ್ಣಿನಲ್ಲಿ ಮರಗಳ ಬುಡದಲ್ಲಿ ಹೂವಿನ ಮೊಗ್ಗುಗಳಂತೆ ಹುಟ್ಟಿಕೊಳ್ಳುವ ಅಣಬೆಗಳನ್ನು ಕಂಡರೆ ಸಾಕು ಕಿತ್ತೊಯ್ಯುತ್ತಾರೆ. ಹಾಗೆಂದು ಎಲ್ಲಾ ಅಣಬೆಗಳನ್ನು ತಿನ್ನಲಾಗುವುದಿಲ್ಲ. ಬಹುತೇಕ ಅಣಬೆಗಳು ನೋಡಲಷ್ಟೇ ಸುಂದರ. ಅಣಬೆಗಳ ಜೀವನ ಶೈಲಿಯೇ ವಿಶಿಷ್ಟ. ಕೊಳೆತು ನಾರುವ ವಸ್ತುಗಳ ಮೇಲೆ, ಮರಗಳ ಕಾಂಡಗಳ ಮೇಲೆ, ಸಗಣಿ ಮೇಲೆ, ಕೊಳೆತ ಎಲೆಗಳ ಮೇಲೆ... ಹೀಗೆ ಹತ್ತು ಹಲವು ಸ್ಥಳಗಳಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತವೆ.

ಇವು ಶಿಲೀಂದ್ರ ಸಸ್ಯಗಳು. ಆದರೆ, ಕೊಂಬೆ, ರೆಂಬೆ, ಬೇರು, ಎಲೆಗಳಿಂದ ಇವು ವಂಚಿತವಾಗಿವೆ. ಪತ್ರಹರಿತ್ತಿಲ್ಲದ ಕಾರಣ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲಾರವು. ಒಂದರ್ಥದಲ್ಲಿ ಇವು ಜೀವಿ-ನಿರ್ಜೀವಿಗಳ ನಡುವೆ ಸಂಬಂಧ ಕಲ್ಪಿಸುವ ಕೊಂಡಿಗಳು. ಅಣಬೆಯನ್ನು ಕಿತ್ತಾಗ ನೆಲದೊಳಗೆ ಹುದುಗಿ ಬೇರಿನಂತೆ ಕಾಣುವ ಬಿಳಿ ದಂಟುಗಳೇ ಈ ಸಸ್ಯದ ಮುಖ್ಯ ಅಂಗ. ಇದಕ್ಕೆ ಹೈಫ್ ಎನ್ನುತ್ತಾರೆ. ಭೂಮಿಯ ಮೇಲ್ಭಾಗಕ್ಕೆ ಛತ್ರಿಯಂತೆ ಬೆಳೆಯುವ ಭಾಗ ಸಸ್ಯದ ಫಲಕಾಯಗಳು.

ಕೊಡೆಯಾಕಾರದ ತಳಭಾಗದಲ್ಲಿ ಇರುವ ಹಾಳೆ ಪದರಗಳಂಥ ರಚನೆಗಳೇ ಕಿವಿರುಗಳು. ಕೊಡೆಯ ಆಕಾರಗಳಲ್ಲಿ ವೈವಿಧ್ಯಗಳಿದ್ದು, ಇವುಗಳ ಆಧಾರದಲ್ಲಿ ಅಣಬೆಗಳನ್ನು ವರ್ಗೀಕರಿಸಲಾಗಿದೆ. ರಂಗುರಂಗಿನ ಅಮನೀಟಾಸಿಸೇರಿಯ, ಅರಳಿದ ಹೂವಿನಂತೆ ಕಾಣುವ ಹಳದಿ ಬಣ್ಣದ ಚಾನೈರೆಲ್ಲಾ, ಚೆಂಡಿನಾಕಾರದ ಕ್ಲಾವೇಶಿಯಾಜೈಗಾಂಟಿಕಾ, ಹಕ್ಕಿಗೂಡಿನಂತಿರುವ ಬರ್ಡ್ಸ್ ನೆಸ್ಟ್, ನಿಡ್ಯುಲಾ ಕ್ಯಾಂಡಿಡಾ, ಕೋಳಿ ಮಾಂಸದಂತಿರುವ ‘ಚಿಕನ್ ಇನ್ ವುಡ್’, ರಾತ್ರಿ ಹೊಳೆಯುವ ವಿಷಕಾರಿ ಜಾಕೋಲ್ಯಾಂಡ್ರಿನ್, ಬಿಳಿ ಬಟನ್ ಆಯಿಸ್ಟರ್ ಹೀಗೆ ಅನೇಕ ಹೆಸರುಗಳ ಅಣಬೆಗಳು ಪ್ರಕೃತಿಯ ಬೆಡಗು ಬಿನ್ನಾಣಕ್ಕೆ ಸಾಕ್ಷಿಯಾಗುತ್ತವೆ.

ಬ್ರೆಡ್ ಅಣಬೆ
ನೆಲದಲ್ಲಿ ಮೂಡಿದ ‘ಡಿಶ್ ಆಂಟೆನಾ’
ಬಣ್ಣದ ಅಣಬೆ
ಅಣಬೆಯ ಈ ಸೌಂದರ್ಯ ಕೆಲವೇ ಕ್ಷಣಗಳು ಮಾತ್ರ
ನಾಪೋಕ್ಲುವಿನಲ್ಲಿ ಸುರಿದ ಮಳೆಗೆ ಕಾಣಿಸಿಕೊಂಡ ಬಣ್ಣದ ಅಣಬೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.