ಮಡಿಕೇರಿ: ಇಲ್ಲಿನ ಪುರಾತನ ಮುತ್ತಪ್ಪ ದೇಗುಲದಲ್ಲಿ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವ ಶುಕ್ರವಾರ ದಿನ, ರಾತ್ರಿ ಇಡೀ ಜರುಗಿತು.
ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯದವರೆಗೂ ನಿರಂತರವಾದ ಉತ್ಸವಗಳು, ದೇವತಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಗುರುವಾರವೇ ಧ್ವಜಾರೋಹಣದ ಮೂಲಕ ಆರಂಭವಾಗಿದ್ದ ಜಾತ್ರಾ ಮಹೋತ್ಸವ ಶುಕ್ರವಾರ ಕಳೆಗಟ್ಟಿತ್ತು. ಸಂಜೆ ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಕ್ತಿಯಿಂದ ಹೆಜ್ಜೆ ಇಟ್ಟರು. ಆಕರ್ಷಕ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ವಿದ್ಯುತ್ ಅಲಂಕೃತ ಮಂಟದಲ್ಲಿ ಕಳಸ ಮತ್ತು ತಾಲಾಪೊಲಿ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.
ತುಂಬು ಕಳಸವಿಡಿದ ಮಹಿಳೆಯರು ಹೆಜ್ಜೆ ಹಾಕಿದರು. ಚಂಡೆ ವಾದ್ಯಗಳ ಸಹಿತ ವಿವಿಧ ಬಗೆಯ ಕಲಾತಂಡಗಳು ಭಾಗಿಯಾಗಿದ್ದವು.
ಸಂಜೆಯ ಹೊತ್ತಿಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀಶಾಸ್ತಪ್ಪ ದೇವರ ವೆಳ್ಳಾಟ, ಮುತ್ತಪ್ಪ ದೇವರ ವೆಳ್ಳಾಟ, ವಿಷ್ಣಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ ಹಾಗೂ ಅನ್ನಸಂತರ್ಪಣೆ ಕಾರ್ಯಗಳು ನಡೆದವು.
ರಾತ್ರಿ ಇಡಿ ಪೋದಿ ವೆಳ್ಳಾಟ, ವಿಷ್ಣುಮೂರ್ತಿ ವೆಳ್ಳಾಟ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕುಟ್ಟಿಚಾತನ್ ದೇವರ ತೆರೆ ಸೇರಿದಂತೆ ಹಲವು ಬಗೆಯ ತೆರೆಗಳು ನಡೆದವು. ಇವುಗಳ ಮಧ್ಯೆ ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾವಿದರು ಪ್ರಸ್ತತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.