
ಕುಶಾಲನಗರ: ಪಟ್ಟಣದ ಯೋಗಾನಂದ ಬಡಾವಣೆ ಕಾವೇರಿ ನದಿಯ ದಂಡೆಯಲ್ಲಿ ನೆಲೆ ನಿಂತ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರ ಮುತ್ತಪ್ಪಸ್ವಾಮಿ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಹೋತ್ಸವ ಅಂಗವಾಗಿ ಬೆಳಿಗ್ಗೆ 5.30 ಗಂಟೆಗೆ ಗಣಪತಿ ಹೋಮ, 10.30ಕ್ಕೆ ಧ್ವಜಾರೋಹಣ ನೆರವೇರಿತು. ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್, ಸಂಜೆ 5 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ಜರುಗಿತು.
ಸಾವಿರಾರು ಭಕ್ತರು ಮುತ್ತಪ್ಪನ ದರ್ಶನ ಪಡೆದರು. ಸಂಜೆ 6 ಗಂಟೆಗೆ ನಗರದ ಅಯ್ಯಪ್ಪ ದೇವಾಲಯದಿಂದ ತಾಲಪೋಲಿ ಮೆರವಣಿಗೆ ವೈಭವಯುತವಾಗಿ ನಡೆಯಿತು.
ಅಲಂಕೃತ ವಾಹನದಲ್ಲಿ ಮುತ್ತಪ್ಪ ಸ್ವಾಮಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ನೂರಾರು ಮಹಿಳೆಯರು ಸಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಕೈಯಲ್ಲಿ ದೀಪ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೇರಳದ ಚಂಡೆವಾದ್ಯ ಹಾಗೂ ವಿವಿಧ ದೇವರ ಮೂರ್ತಿಗಳ ಪ್ರದರ್ಶನ ಎಲ್ಲಾರ ಗಮನ ಸೆಳೆಯಿತು. ಬಣ್ಣ ಬಣ್ಷದ ಪಟಾಕಿ, ಬಾಣಬಿರುಸುಗಳ ಪ್ರದರ್ಶನ ನೆರೆದಿದ್ದ ಭಕ್ತರ ಮನಸೂರೆಗೊಂಡಿತು.
ದೇವಾಲಯದ ಮುಂಭಾಗದ ಭವ್ಯ ಕಲಾ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತೆರೆ ಮಹೋತ್ಸವಕ್ಕೆ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.
ರಾತ್ರಿ ಕಳಿಗಪಾಟು, ಮಧ್ಯರಾತ್ರಿ ಕಳಸ ಆಗಮನವಾಯಿತು. ಈ ಸಂದರ್ಭದಲ್ಲಿ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ, ಉತ್ಸವ ಸಮಿತಿ ಅಧ್ಯಕ್ಷ ಎಂ.ಡಿ.ರಂಜಿತ್ ಕುಮಾರ್, ಉಪಾಧ್ಯಕ್ಷ ವಿಮಲ್ ನಾಯರ್, ರಸಜೇಶ್, ವಿನು ಕಮಲ್, ಸಂದೀಪ್ ಸಿ.ಆರ್.ನರೇಶ್ ಕುಮಾರ್, ಎಂ.ಎಸ್.ಮಣಿಕಂಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.